ಕುಮಟಾ: ತಾಲೂಕಿನ ದೀವಗಿ ಕೆಳಗಿನಕೇರಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ರಜತ ಮಹೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.
ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ರಜತ ಮಹೋತ್ಸವ ಸಮಿತಿ ಮತ್ತು ಎಸ್.ಡಿ.ಎಮ್.ಸಿ ಸಹಭಾಗಿತ್ವದಲ್ಲಿ ನಡೆದ ದೀವಗಿ ಕೆಳಗಿನಕೇರಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ರಜತ ಮಹೋತ್ಸವ ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಭಟ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಈ ಶಾಲೆಯು ಇಂದಿನ ಇಂಗ್ಲಿಷ್ ಶಿಕ್ಷಣ ಹಾಗೂ ಖಾಸಗಿ ಶಾಲೆಗಳ ನಡುವೆಯೂ ಅತೀ ಹೆಚ್ಚು ಮಕ್ಕಳನ್ನು ಹೊಂದಿದ್ದು, ಶಿಕ್ಷಣದ ಗುಣಮಟ್ಟದ ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಮಳೆಗಾಲದಲ್ಲಿ ಈ ಶಾಲೆ ಬಹುಪಾಲು ಮುಳುಗಡೆಯಾಗುತ್ತದೆ. ನೆರೆಯ ನಂತರ ಶಾಲೆ ಸಂಪೂರ್ಣ ನೀರು, ಮಣ್ಣು ಕಸಗಳಿಂದ ಕೂಡಿರುತ್ತದೆ. ಈ ವೇಳೆ ಶೈಕ್ಷಣಿಕ ಕಾಳಜಿಯುಳ್ಳ ಅನೇಕರು ಸ್ವಪ್ರೇರಣೆಯಿಂದ ಸ್ವಚ್ಛತೆ ಕಾರ್ಯ ಕೈಗೊಳ್ಳುತ್ತಾರೆ. ಇಂತಹ ಸ್ವಚ್ಛಂದ ಮನಸ್ಥಿತಿಯಿರುವ ಜನ ಇಲ್ಲಿರುವುದು ನಿಜಕ್ಕೂ ಪ್ರಶಂಸನೀಯ ಎಂದರು.
ಕಾರ್ಯಕ್ರಮದ ಪ್ರವೇಶ ದ್ವಾರ ಉದ್ಘಾಟಿಸಿದ ಕಾಂಗ್ರೆಸ್ ಯುವ ಮುಖಂಡ ರವಿಕುಮಾರ ಶೆಟ್ಟಿ ಮಾತನಾಡಿ, ಶಾಲಾ ಶೈಕ್ಷಣಿಕ ಉನ್ನತಿಗೆ ಈ ಹಿಂದೆ ಅನೇಕ ಕೊಡುಗೆಗಳನ್ನು ನೀಡಲಾಗಿದೆ. ಇನ್ನೂ ಮುಂದೆಯೂ ಅಗತ್ಯವಿದ್ದಲ್ಲಿ ನೆರವು ನೀಡಲಾಗುವುದು. ಶಾಲೆಯು 25 ವರ್ಷ ಪೂರೈಸಿದೆ ಎಂದರೆ ಅದರ ಹಿಂದೆ ಶಿಕ್ಷಕರ ಶ್ರಮ ಬಹುಮುಖ್ಯವಾದದ್ದು. ಆರಂಭದಿಂದ ಇಲ್ಲಿಯವರೆಗೆ ಅದೆಷ್ಟೋ ಮಕ್ಕಳಿಗೆ ಜೀವನ ಪಾಠ ಕಲಿಸಿ, ಇಂದು ಆ ಮಕ್ಕಳು ಒಂದು ಹಂತದವರೆಗೆ ತಲುಪಿದ್ದಾರೆ. ಅವರೆಲ್ಲರ ಸಹಕಾರದಿಂದ ಇಂದು ಇಷ್ಟೊಂದು ದೊಡ್ಡ ಪ್ರಮಾಣದ ರಜತ ಮಹೋತ್ಸವ ಕಾರ್ಯಕ್ರಮ ಮಾಡಲು ಸಾಧ್ಯವಾಗಿದೆ. ಹೀಗಾಗಿ ಇವರೆಲ್ಲರೂ ಅಭಿನಂದನಾರ್ಹರು ಎಂದರು.
ಈ ಸಂದರ್ಭದಲ್ಲಿ ಶಾಲೆಯ ಹಿರಿಯ ಶಿಕ್ಷಕರು, ಎಸ್.ಡಿ.ಎಮ್.ಸಿ ಸದಸ್ಯರು, ಸಾಮಾಜಿಕ ಕ್ಷೇತ್ರ ಹಾಗೂ ಶೌರ್ಯ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಎನ್.ಟಿ.ಪ್ರಮೋದರಾವ್, ಬಿಜೆಪಿ ಮಂಡಲಾಧ್ಯಕ್ಷ ಹೇಮಂತ ಗಾಂವಕರ್, ಬಿ.ಆರ್.ಸಿ ರೇಖಾ ನಾಯ್ಕ, ಗ್ರಾ.ಪಂ ಸದಸ್ಯರಾದ ಪ್ರವೀಣ ಅಂಬಿಗ, ಸೆಲ್ವಿನ್ ರೊಡ್ರಗೀಸ್, ಎಸ್.ಡಿ.ಎಮ್.ಸಿ ಸದಸ್ಯರಾದ ಗಂಗಾಧರ ಅಂಬಿಗ, ಪ್ರಮುಖರಾದ ಉತ್ತಮ ದೇಶಭಂಡಾರಿ, ಜಿ.ಜಿ.ಹೆಗಡೆ, ಸುರೇಶ ಭಟ್, ಥಾಮಸ್ ರೊಡ್ರಗೀಸ್ ಇತರರಿದ್ದರು.