ಕಾರವಾರ: ಇಂದಿನ ಯುವಜನತೆಗೆ ಎಚ್.ಐ.ವಿ,/ಏಡ್ಸ್ ಬಗ್ಗೆ ಸರಿಯಾದ ಮಾಹಿತಿ ಅವಶ್ಯಕವಾಗಿದೆ. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಯುವ ಜನತೆ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಎಂದು ದಿವೇಕರ ವಾಣಿಜ್ಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಕೇಶವ ಕೆ.ಜಿ. ಹೇಳಿದರು.
ದಿವೇಕರ ವಾಣಿಜ್ಯ ಕಾಲೇಜಿನಲ್ಲಿ ಕರ್ನಾಟಕ ಏಡ್ಸ್ ನಿಯಂತ್ರಣ ಸೊಸೈಟಿ ಬೆಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಕ ಇಲಾಖೆ, ನೆಹರು ಯುವ ಕೇಂದ್ರ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕಗಳ ಸಂಯುಕ್ತಾಶ್ರಯದಲ್ಲಿ ನೆಹರು ಯುವ ಕೇಂದ್ರದ ಸದಸ್ಯರುಗಳಿಗಾಗಿ ಏರ್ಪಡಿಸಿದ್ದ ಎಚ್.ಐ.ವಿ/ ಏಡ್ಸ್ ರಕ್ತದಾನ ಕುರಿತು ಮಾಹಿತಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಎಚ್‌ಐವಿ ಅಪಾಯದಿಂದ ಯುವಜನತೆ ದೂರವಾಗಲು ಜಿಲ್ಲಾ ಏಡ್ಸ್ ನಿಯಂತ್ರಣ ಮಾಡುತ್ತಿರುವ ಈ ಮಾಹಿತಿ ಕಾರ್ಯಗಾರ ನಿಜಕ್ಕೂ ಉಪಯೋಗಕಾರಿಯಾಗಿದ್ದು, ಯುವ ಜನತೆ ಹೆಚ್ಚಿನ ಸದುಪಯೋಗ ಪಡಿಸಿಕೊಳ್ಳಬೇಕು. ರಕ್ತದಾನದ ಬಗ್ಗೆ ಇರುವ ತಪ್ಪು ತಿಳುವಳಿಕೆಯಿಂದ ಹೊರಬಂದು ರಕ್ತದಾನ ಮಾಡಲು ಮುಂದಾಗಬೇಕು ಎಂದು ಹೇಳಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಮಂಜುನಾಥ ಆರ್., 2030ರ ವೇಳೆಗೆ ಎಚ್‌ಐವಿ ಮುಕ್ತ ಭಾರತವನ್ನಾಗಿ ಮಾಡುವ ಪ್ರಯತ್ನದಲ್ಲಿ ಆರೋಗ್ಯ ಇಲಾಖೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಪ್ರತಿಯೊಬ್ಬ ಯುವಜನತೆ ಎಚ್‌ಐವಿ ಬಗ್ಗೆ ಮಾಹಿತಿ ಪಡೆದುಕೊಂಡು ಸ್ವಯಂಪ್ರೇರಿತರಾಗಿ ಎಚ್‌ಐವಿ ರಕ್ತ ಮಾಡಿಸಿಕೊಂಡು ತಮ್ಮ ಎಚ್‌ಐವಿ ಸ್ಥಿತಿಗತಿಯನ್ನು ತಿಳಿದುಕೊಂಡಿರಬೇಕು ಎಂದು ಹೇಳಿದರು.
ನೆಹರೂ ಯುವ ಕೇಂದ್ರದ ಜಿಲ್ಲಾ ಮಟ್ಟದ ಅಧಿಕಾರಿ ಯಶ್ವಂತ ಜಾಧವ, ಇಂದಿನ ಯುವಕ ಯುವತಿಯರು ರಕ್ತದಾನದಂತಹ ಮಾನವೀಯ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಉತ್ತಮ ಜೀವನಕ್ಕಾಗಿ ಇಂತಹ ಕಾರ್ಯಗಾರಗಳು ಉಪಯೋಗಕಾರಿಯಾಗಿದೆ ಎಂದು ಹೇಳಿದರು.
ಐಸಿಟಿಸಿ ಆಪ್ತಸಮಾಲೋಚಕ ಪ್ರದೀಪ್ ನಾಯ್ಕ ಎಚ್.ಐ.ವಿ/ ಏಡ್ಸ್ ಮತ್ತು ರಕ್ತದಾನದ ಕುರಿತು, ಇನ್ನೊಬ್ಬ ಆಪ್ತಸಮಾಲೋಚಕ ವಿನಾಯಕ ಪಟಗಾರ ಯುವಜನತೆ ಯಾಕೆ ಅಪಾಯದಲ್ಲಿದ್ದಾರೆ? ವಿಷಯದ ಕುರಿತು, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ವಿಶ್ಲೆಷಣಾ ಅಧಿಕಾರಿ ಎಸ್.ಬಿ.ಹಿರೇಮಠ ಸಾಮಾಜಿಕ ಜಾಲತಾಣಗಳಲ್ಲಿ ಕೆಎಸ್‌ಎಪಿಎಸ್ ಕುರಿತು ಮಾಹಿತಿ ಕಾರ್ಯಗಾರದಲ್ಲಿ ತರಬೇತಿ ನೀಡಿದರು.
ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದ ಯೂತ್ ರೆಡ್‌ಕ್ರಾಸ್ ವಿಂಗ್‌ನ ಕಾರ್ಯಕ್ರಮಾಧಿಕಾರಿ ಸುರೇಶ ಗುಡಿಮನಿ ಕಾರ್ಯಗಾರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿದರು. ಜಿಲ್ಲಾ ಮೇಲ್ವಿಚಾರಕಿ ಶಾಲಿನಿ ಶಿವಳ್ಳಿಮಠ, ಲೆಕ್ಕಾಧಿಕಾರಿ ವಿನೋದ ಹೊನ್ನಾವರ, ಕಾಲೇಜಿನ ವಿದ್ಯಾರ್ಥಿ ಪ್ರತಿನಿಧಿ ವೈಭವ ವೆರ್ಣೇಕರ್, ಮಹಿಳಾ ಕಾರ್ಯದರ್ಶಿ ಶ್ವೇತಾ ಉಪಸ್ಥಿತರಿದ್ದು ಕಾರ್ಯಗಾರದ ಯಶಸ್ವಿಗೆ ಸಹಕರಿಸಿದರು. ಐವತ್ತಕ್ಕೂ ಹೆಚ್ಚಿನ ಯುವಕ- ಯುವತಿಯರು ಕಾರ್ಯಗಾರದಲ್ಲಿ ಭಾಗವಹಿಸಿದರು.
ಯುವಜನತೆಗೆ ಎಚ್‌ಐವಿ ಬಗ್ಗೆ ಸರಿಯಾದ ಮಾಹಿತಿ ಅವಶ್ಯ: ಡಾ.ಕೇಶವ ಕೆ.ಜಿ.
