Slide
Slide
Slide
previous arrow
next arrow

ಕೇಶವ, ಮೋಹನ ಹೆಗಡೆಗೆ ಶ್ರೀಕೃಷ್ಣ ಸ್ಮರಣ ಪುರಸ್ಕಾರ ಪ್ರದಾನ

300x250 AD

ಶಿರಸಿ: ಹಿರಿಯ ಯಕ್ಷಗಾನ ತಾಳಮದ್ದಲೆ ಅರ್ಥಧಾರಿಯಾಗಿದ್ದ ಕೆರೇಕೈ ಕೃಷ್ಣ ಭಟ್ಟ ಅವರ ಸಂಸ್ಮರಣ ಕಾರ್ಯಕ್ರಮದಲ್ಲಿ ಭಾಗವತ ಕೊಳಗಿ ಕೇಶವ ಹೆಗಡೆ ಹಾಗೂ ಪ್ರಸಿದ್ಧ ಅರ್ಥಧಾರಿ, ಸೆಲ್ಕೋ ಇಂಡಿಯಾದ ಸಿಇಓ ಮೋಹನ ಹೆಗಡೆ ಅವರಿಗೆ ಶ್ರೀಕೃಷ್ಣ ಸ್ಮರಣ ಪುರಸ್ಕಾರ ಪ್ರದಾನ ಮಾಡಲಾಯಿತು.
ನಗರದ ಟಿಎಂಎಸ್ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಮಾಡಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ನೇತ್ರತಜ್ಞ ಡಾ.ಎಚ್.ಎಸ್.ಮೋಹನ, ಶಿಸ್ತು- ಸಂಯಮ ಸಂಘಟಕರು ಇಟ್ಟುಕೊಂಡರೆ ಖಂಡಿತ ಸಭಾಸದರು ತೋರಿಸುತ್ತಾರೆ. ಇಲ್ಲಿ ಅಚ್ಚುಕಟ್ಟಾದ ಕಾರ್ಯಕ್ರಮ. ನನ್ನ ತಂದೆ, ಕೆರೇಕೈ ಕೃಷ್ಣ ಭಟ್ ಪರಸ್ಪರ ಒಡನಾಡಿಗಳು. ಅವರ ವಾಲಿಯ ಪ್ರವೇಶ ನೋಡಿದ್ದೆ, ಅದ್ಭುತವಾಗಿದ್ದವು ಎಂದರು.
ಹಿರಿಯ ಸಾಮಾಜಿಕ ಕಾರ್ಯಕರ್ತೆ ವೈಶಾಲಿ ವಿ.ಪಿ.ಹೆಗಡೆ, ಕೃಷ್ಣ ಭಟ್ಟ ಅವರ ಸಾಧನೆ ಸಣ್ಣದಲ್ಲ. ಅವರ ಒಡನಾಟ ಮರೆಯಲು ಸಾಧ್ಯವಿಲ್ಲ. ಅವರ ವ್ಯಕ್ತಿತ್ವ ಶುಭ್ರವಾಗಿತ್ತು ಎಂದರು. ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಮೋಹನ ಹೆಗಡೆ, ಯಕ್ಷಗಾನ ತಾಳಮದ್ದಲೆಯಲ್ಲಿ ಕೆರೇಕೈ ಕೃಷ್ಣ ಭಟ್ಟರು ಪ್ರಾತಃಸ್ಮರಣೀಯರು. ಸಾಂಸ್ಕೃತಿಕ ಲೋಕವನ್ನು ತಮ್ಮ ನಡೆ ಹಾಗೂ ನುಡಿಯಿಂದ ಶ್ರೀಮಂತಗೊಳಿಸಿದ ಆದರ್ಶ ವ್ಯಕ್ತಿಗಳು. ಯುವ ತಲೆಮಾರು ಈ ಕ್ಷೇತ್ರಗಳಿಗೆ ಇನ್ನಷ್ಟು ಬರಬೇಕು ಎಂದರು.
ಇನ್ನೋರ್ವ ಪುರಸ್ಕೃತ ಕೊಳಗಿ ಕೇಶವ ಹೆಗಡೆ ಮಾತನಾಡಿ, ಕಳೆದ 40 ದಿನಗಳಲ್ಲಿ ಕೆರೆಮನೆ ಮಹಾಬಲ ಹೆಗಡೆ ಅವರ ಹೆಸರಿನಲ್ಲಿ ಗಾನ ಮಹಾಬಲ, ನೆಬ್ಬೂರು ಭಾಗವತರ ಹೆಸರಿನ ಪ್ರಶಸ್ತಿ, ಈಗ ತಾಳಮದ್ದಲೆಯ ಪ್ರಸಿದ್ಧ ಅರ್ಥಧಾರಿ ಕೃಷ್ಣ ಭಟ್ ಅವರ ಪ್ರಶಸ್ತಿ ಬಂದಿದ್ದು ನನಗೆ ಭಾರತ ರತ್ನಕ್ಕಿಂತ ದೊಡ್ಡದು ಎಂದರು. ದೂರ್ವಾಸ ಪಾತ್ರ ಹೇಗಿರಬೇಕು ಎಂದು ನೋಡಲು ಕೃಷ್ಣ ಭಟ್ಟರ ದೂರ್ವಾಸ ಪಾತ್ರ ನೋಡಬೇಕಿತ್ತು  ಎಂದೂ ನೆನಪಿಸಿಕೊಂಡರು.
ಪ್ರಾಸ್ತಾವಿಕವಾಗಿ ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೇಕೈ ಮಾತನಾಡಿದರು. ರಾಘವೇಂದ್ರ ಬೆಟ್ಟಕೊಪ್ಪ ನಿರ್ವಹಿಸಿದರು. ಈ ವೇಳೆ ಸುನಂದಾ ಭಟ್ಟ, ರಘುರಾಮ ಭಟ್ಟ, ಜ್ಯೋತಿ ಭಟ್ಟ, ಕೊಳಗಿ ಪತ್ನಿ ಪ್ರೀತಾ ಹೆಗಡೆ ಇತರರು ಇದ್ದರು. ಕುರಿಯ ವಿಠಲ ಶಾಸ್ತ್ರೀ ಸಾಂಸ್ಕೃತಿಕ ಪ್ರತಿಷ್ಠಾನದ 25ನೇ ವರ್ಷದ ಶತ ತಾಳಮದ್ದಲೆ ಅಂಗವಾಗಿ 75ನೇ ತಾಳಮದ್ದಲೆ ಶಲ್ಯ ಸಾರಥ್ಯ  ನಡೆಯಿತು. ಕೌರವನಾಗಿ ಉಜಿರೆ ಅಶೋಕ ಭಟ್ಟ, ಕರ್ಣನಾಗಿ ಮೋಹನ ಹೆಗಡೆ, ಶಲ್ಯನಾಗಿ ಉಮಾಕಾಂತ ಭಟ್ಟ ಕೆರೇಕೈ ಪಾತ್ರ ಕಟ್ಟಿಕೊಟ್ಟರು. ಭಾಗವತರಾಗಿ ಕೊಳಗಿ ಕೇಶವ ಹೆಗಡೆ, ಮದ್ದಲೆಯಲ್ಲಿ ಶಂಕರ ಭಾಗವತ ಸಹಕಾರ ನೀಡಿದರು.

300x250 AD
Share This
300x250 AD
300x250 AD
300x250 AD
Back to top