ಹೊನ್ನಾವರ: ತಾಲೂಕಿನ ಮಂಕಿ ಪ.ಪಂ. ಪೌರಕಾರ್ಮಿಕರ ನೇಮಕಕ್ಕೆ ಸಂಬಂಧಿಸಿದಂತೆ ಶಾಸಕರ ಹಸ್ತಕ್ಷೇಪ ಆರೋಪಕ್ಕೆ ಶಾಸಕ ಸುನೀಲ ನಾಯ್ಕ ಸ್ಪಷ್ಟನೆ ನೀಡಿದ್ದಾರೆ.
ಪೌರಕಾರ್ಮಿಕರ ಆಯ್ಕೆಗೆ ಸರ್ಕಾರ ಜ.13ರಂದು ಆದೇಶ ಹೊರಡಿಸಿದ್ದು, ಫೆ.13ವರೆಗೆ ಪಟ್ಟಣ ಪಂಚಾಯತ್ ನೋಟಿಸ್ ಬೋರ್ಡ್ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿರುವ ಬಗ್ಗೆ ಪ್ರಕಟಣೆಯನ್ನು ಹಾಕಲಾಗಿತ್ತು. ಸ್ಥಳೀಯ ಕಾಂಗ್ರೆಸ್ಸಿಗರು ಈ ಆಯ್ಕೆಯ ಕುರಿತು ಜನರಲ್ಲಿ ತಪ್ಪು ಮಾಹಿತಿಯನ್ನು ನೀಡಿ ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಬುಧವಾರ ಮಾಡಿದ್ದಾರೆ.ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಪಟ್ಟಣ ಪಂಚಾಯತ್ ನಲ್ಲಿ ಹೊರಗುತ್ತಿಗೆ, ದಿನಗೂಲಿ ಆಧಾರದಲ್ಲಿ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರನ್ನು ಖಾಯಂಗೊಳಿಸಿ ಸೇವಾ ಭದ್ರತೆ ನೀಡುವ ಒಂದು ಯೋಜನೆ ಇದಾಗಿರುವ ಬಗ್ಗೆ ಸ್ಪಷ್ಟ ಉಲ್ಲೇಖಿಸಲಾಗಿದೆ. ಸ್ಥಳೀಯ ಕಾಂಗ್ರೆಸ್ಸಿಗರು ಈ ಕುರಿತು ಅಪಪ್ರಚಾರ ಮಾಡಿ ಜನರನ್ನು ದಿಕ್ಕು ತಪ್ಪಿಸುವ ಕೆಲಸಕ್ಕೆ ಕೈ ಹಾಕಿರುವುದು ಹೇಯಕರ ಸಂಗತಿಯಾಗಿದೆ ಎಂದಿದ್ದಾರೆ.
ಮಂಕಿ ಪಟ್ಟಣ ಪಂಚಾಯತ್ ಖಾಲಿ ಇರುವ ಪೌರಕಾರ್ಮಿಕರ ಒಟ್ಟೂ ವೃಂದಬಲ 29, ಆದರೆ ಈಗ ಸರ್ಕಾರ ಆಯ್ಕೆ ಮಾಡುತ್ತಿರುವುದು ಕೇವಲ 6 ಜನ ಪೌರಕಾರ್ಮಿಕರನ್ನು, ಅದೂ ಕೂಡ ಈಗಾಗಲೇ 2 ವರ್ಷಗಳಿಂದ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವವರನ್ನೇ ವಿವಿಧ ಷರತ್ತಿನಡಿಯಲ್ಲಿ ಆಯ್ಕೆ ಮಾಡಿ ಖಾಯಂಗೊಳಿಸಲಾಗುತ್ತಿದೆ. ಈ ನೇರನೇಮಕಾತಿ ಮಾಡುವ ಪ್ರಕ್ರಿಯೆಯಲ್ಲಿ ಪತ್ರಿಕಾ ಪ್ರಕಟಣೆ ಮತ್ತು ಅರ್ಜಿ ಸ್ವೀಕಾರ ಕಡ್ಡಾಯವಾಗಿದ್ದು ಈಗಾಗಲೇ ಕಾರ್ಯನಿರ್ವಹಿಸುತ್ತಿರುವವರಿಂದಲೂ ಅರ್ಜಿ ಸ್ವೀಕಾರ ಮಾಡಲಾಗುತ್ತದೆಯೇ ಹೊರತು, ಹೊಸ ಮುಖಗಳನ್ನು ಆಯ್ಕೆ ಮಾಡಲಾಗುವುದಿಲ್ಲ. ಕಾಂಗ್ರೆಸ್ ಮುಖಂಡರು ಸೃಷ್ಟಿಸಿದ ಗೊಂದಲದಿಂದ ಸ್ಥಳೀಯ ಜನರಲ್ಲಿ ಆತಂಕ ಸೃಷ್ಟಿಸಿಯಾಗಿರುವುದು ನನ್ನ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಈ ಆತಂಕವನ್ನು ದೂರಮಾಡುವ ನಿಟ್ಟಿನಲ್ಲಿ, ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರ ಮುಖೇನ, ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗಿದ್ದು ಮತ್ತೆ ಮೂರು ದಿನಗಳ ಹೆಚ್ಚಿನ ಕಾಲಾವಕಾಶವನ್ನು ಅರ್ಜಿಹಾಕಲು ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.