ಸಿದ್ದಾಪುರ: ಉತ್ಸವ ಸಂಘಟಿಸಿದಂತೆ ಊರನ್ನು ಕಟ್ಟಿ ಬೆಳೆಸುವ ಕಾರ್ಯ ಮಾಡಬೇಕು. ಊರಿನ ಅಭಿವೃದ್ಧಿ ವಿಷಯ ಬಂದಾಗ ಸ್ಪರ್ಧೆ, ಸಂಘರ್ಷ ಇರಬಾರದು ಎಂದು ರಾಮಚಂದ್ರಾಪುರದ ರಾಘವೇಶ್ವರ ಭಾರತೀ ಮಹಾಸ್ವಾ ಮಿಗಳು ಹೇಳಿದರು.
ಅವರು ಮೂರುದಿನಗಳ ಕಾಲ ಜರುಗಿದ ಸಿದ್ದಾಪುರ ಉತ್ಸವದ ಕೊನೆಯ ದಿನ ನಡೆದ ಸಮಾರೋಪದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಊರಿನ ಅಭಿಮಾನ ಯಾವತ್ತೂ ನಾಶವಾಗಬಾರದು. ಸ್ವರ್ಗಕ್ಕಿಂತ ಮಿಗಿಲಾದದ್ದು ಜನ್ಮಭೂಮಿ. ನಮ್ಮ ಪಾತಿಗೆ ಜನ್ಮಭೂಮಿಯೇ ಅಯೋಧ್ಯೆ. ಊರಿನ ಉತ್ಸವ ಉತ್ತಮ ಕಾರ್ಯ. ಸಿದ್ದಾಪುರ ಪುಣ್ಯಭೂಮಿ. ಇದು ಸಿದ್ಧರ ಪುರ.ಪ್ರಸಿದ್ಧಿಯೇ ಮುಖ್ಯವಾದ ಪುರವಲ್ಲ. ಸ್ವಾರ್ಥ ಇಲ್ಲದೇ ಸಮಾಜಕ್ಕೆ ಕೊಡುಗೆ ನೀಡುವದು ಮುಖ್ಯವಾಗಬೇಕು. ನಿಷ್ಠೆಯಿಂದ ದುಡಿದವರು ಉಪೇಕ್ಷಿತರಾಗಬಾರದು. ಉತ್ಸವದ ಜೊತೆಗೆ ಊರಿನ ಅಭಿವೃದ್ಧಿಯೂ ನಮ್ಮ ಗುರಿಯಾಗಬೇಕು ಎಂದರು.
ಈ ಸಂದರ್ಭದಲ್ಲಿ ಉತ್ಸವ ಸಮಿತಿಯ ಪದಾಧಿಕಾರಿಗಳನ್ನು, ಕಾರ್ಯಕರ್ತರನ್ನು, ಉತ್ಸವದ ಕುರಿತಾಗಿ ಆಯೋಜಿಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರನ್ನು ಶ್ರೀಗಳು ಶಾಲು ಹೊದೆಸಿ ಗೌರವಿಸಿದರು. ತೀರ್ಥಹಳ್ಳಿಯ ಶಿಕ್ಷಕರ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷ ಮಾಬ್ಲೇಶ್ವರ ಹೆಗಡೆ ಕುಡೆಗೋಡ ಮಾತನಾಡಿದರು.
ರೂಪಾ ಶೇಟ್, ನಂದಿನಿ ಪ್ರಾರ್ಥಿಸಿದರು. ಸಮಿತಿಯ ಗೌರವಾಧ್ಯಕ್ಷ ಉಪೇಂದ್ರ ಪೈ ಸ್ವಾಗತಿಸಿದರು. ಅಧ್ಯಕ್ಷ ಕೆ.ಜಿ.ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ, ಪಿ.ಡಬ್ಲೂ.ಡಿ.ಗುತ್ತಿಗೆದಾರರ ಸಂಘದ ಅಧ್ಯಕ್ಷ ಸತೀಶ ಗೌಡರ್, ಸಮಿತಿಯ ಉಪಾಧ್ಯಕ್ಷರಾದ ನಾಗರಾಜ ನಾಯ್ಕ, ವೀರಭದ್ರ ನಾಯ್ಕ, ಸತೀಶ ಹೆಗಡೆ, ಸ್ವಾಗತ ಸಮಿತಿ ಅಧ್ಯಕ್ಷ ನಾಗರಾಜ ನಾಯ್ಕ ಮಾಳ್ಕೋಡ, ಪ್ರಧಾನ ಕಾರ್ಯದರ್ಶಿ ಹರೀಶ ಗೌಡರ್, ವಿನಾಯಕ ನಾಯ್ಕ ಕೊಂಡ್ಲಿ, ಎಚ್.ಕೆ.ಶಿವಾನಂದ, ಕೋಶಾಧ್ಯಕ್ಷ ವಿನಯ ಹೊನ್ನೆಗುಂಡಿ ಸೇರಿದಂತೆ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.