ಹೊನ್ನಾವರ: ಸರಕಾರವು ಜನಸಾಮಾನ್ಯರ ಉತ್ತಮ ಆರೋಗ್ಯಕ್ಕಾಗಿ ಹಲವಾರು ಯೋಜನೆಗಳನ್ನು, ಆರೋಗ್ಯ ಸೇವೆಗಳನ್ನು ಜಾರಿಗೆ ತಂದಿದೆ. ಅದನ್ನು ಸರಿಯಾಗಿ ಸದುಪಯೋಗಪಡಿಸಿಕೊಳ್ಳಲು ಸಾರ್ವಜನಿಕರು ಮುಂದೆ ಬರಬೇಕು. ಆರೋಗ್ಯ ಸೇವೆಗಳ ಬಗ್ಗೆ ಸಾರ್ವಜನಿಕರು ಸರಿಯಾಗಿ ಮಾಹಿತಿ ಪಡೆದುಕೊಳ್ಳಬೇಕು ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ.ಉಷಾ ಹಾಸ್ಯಗಾರ ಹೇಳಿದರು.
ಅವರು ಕಾಸರಕೊಡಿನ ಕಲಾಧಾರ ಕ್ಯಾಸೊ ಫ್ಯಾಕ್ಟರಿಯಲ್ಲಿ ಕರ್ನಾಟಕ ಏಡ್ಸ್ ನಿಯಂತ್ರಣ ಸಂಸ್ಥೆ, ಆರೋಗ್ಯ ಇಲಾಖೆ, ಸೃಷ್ಠಿ ಸಂಸ್ಥೆ, ತಾಲೂಕು ಆಸ್ಪತ್ರೆಯ ಐಸಿಟಿಸಿ ವಿಭಾಗಗಳ ಸಂಯಕ್ತಾಶ್ರಯದಲ್ಲಿ ನಡೆದ ‘ಸಮುದಾಯ ತಪಾಸಣಾ ಶಿಬಿರ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ತಾಲೂಕು ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ರಾಜೇಶ ಕಿಣಿ ಮಾತನಾಡಿ, ಇಂದಿನ ಒತ್ತಡಯುಕ್ತ ಜೀವನಶೈಲಿಯಿಂದ ನಾವು ಬಿಪಿ, ಶುಗರ್ ಸೇರಿದಂತೆ ಅನೇಕ ಕಾಯಿಲೆಗಳಿಗೆ ಬಹು ಬೇಗನೆ ಒಳಗಾಗುತ್ತಿದ್ದೇವೆ. ಇಂತಹ ಕಾಯಿಲೆಗಳಿಂದ ದೂರ ಇರಬೇಕಾದರೆ ನಿಯಮಿತವಾಗಿ ಆರೋಗ್ಯ ತಪಾಸಣೆಗೆ ಒಳಗಾಗಬೇಕು. ಇವತ್ತಿನ ಈ ಶಿಭಿರದ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಹೇಳಿದರು.
ಐಸಿಟಿಟಿ ಆಪ್ತಸಮಾಲೋಚಕ ವಿನಾಯಕ ಪಟಗಾರ ಪ್ರಾಸ್ತಾವಿಕ ನುಡಿಗಳನ್ನಾಡಿದ್ದರು. ಕಲಾಧರ ಪ್ಯಾಕ್ಟರಿಯ ಮುಖ್ಯಸ್ಥ ಬಾಲಕೃಷ್ಣ ಹೆಗಡೆ ಎಲ್ಲರನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಐಸಿಟಿಸಿ ವಿಭಾಗದ ಪ್ರಯೋಗಶಾಲಾ ತಂತ್ರಜ್ಞ ಅಧಿಕಾರಿ ಉಮೇಶ ಕೆ., ಸಮುದಾಯ ಆರೋಗ್ಯ ಅಧಿಕಾರಿಗಳು ಉಪಸ್ಥಿತರಿದ್ದರು. ಫ್ಯಾಕ್ಟರಿಯ ನೂರಕ್ಕೂ ಹೆಚ್ಚಿನ ಕಾರ್ಮಿಕರು ತಪಾಸಣಾ ಶಿಬಿರದಲ್ಲಿ ಭಾಗವಹಿಸಿದ್ದರು. ವಿವಿಧ ರೀತಿಯ ರಕ್ತ ಪರೀಕ್ಷೆ ಸೇರಿದಂತೆ ಆರೋಗ್ಯ ಸೇವೆ ನೀಡಲಾಯಿತು.