ಸಿದ್ದಾಪುರ: 2022- 23ನೇ ಸಾಲಿನ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸ್ವ- ಸಹಾಯ ಸಂಘದ ಮಹಿಳೆಯರಿಂದ ನರ್ಸರಿ ಕಾಮಗಾರಿ ಭರದಿಂದ ಸಾಗಿದೆ.
ತಾಲೂಕಿನ ಬಿದ್ರಕಾನದಲ್ಲಿ 5 ಲಕ್ಷ, ಹಾರ್ಸಿಕಟ್ಟಾದಲ್ಲಿ 2.5 ಲಕ್ಷ ವೆಚ್ಚದಲ್ಲಿ ನರ್ಸರಿ ನಿರ್ಮಿಸಲಾಗುತ್ತಿದ್ದು, ದೀಪಾ ಸ್ತ್ರೀಶಕ್ತಿ ಸಂಘ ಹಾಗೂ ಮಹಾಮಾಯಿ ಸ್ವ- ಸಹಾಯ ಸಂಘದ ಮಹಿಳೆಯರು ತೊಡಗಿಸಿಕೊಂಡಿದ್ದಾರೆ. ನರ್ಸರಿ ನಿರ್ಮಾಣದಲ್ಲಿ ವಿವಿಧ ಜಾತಿಯ ಸಸ್ಯೋತ್ಪಾದನೆ ಕೈಗೊಳ್ಳಲಾಗಿದ್ದು, ಬಿದ್ರಕಾನ ಗ್ರಾಮ ಪಂಚಾಯತಿಯಲ್ಲಿ ಮಾವು (2700), ಹಲಸು (2700), ಗೇರು (2700), ಅಡಿಕೆ (3450), ಶ್ರೀಗಂಧ (1000), ಸಾಗವಾನಿ (1000) ಗಿಡಗಳು ಹಾಗೂ ಹಾರ್ಸಿಕಟ್ಟಾ ವ್ಯಾಪ್ತಿಯ ನರ್ಸರಿಯಲ್ಲಿ ಮಾವು (800), ಹಲಸು (800), ಗೇರು (800), ಅಡಿಕೆ (800), ಶ್ರೀಗಂಧ (1000), ಸಾಗವಾನಿ (1000) ಗಿಡಗಳನ್ನು ಬೆಳೆಸಲಾಗುತ್ತಿದೆ.
ಇನ್ನು ಪ್ರತಿ ಮಾವಿನ ಗಿಡಕ್ಕೆ 24.51 ರೂ., ಹಲಸಿನ ಗಿಡಕ್ಕೆ 34.31 ರೂ., ಗೇರು 28.16 ರೂ., ಅಡಿಕೆ 14.35 ರೂ., ಶ್ರೀಗಂಧ ಹಾಗೂ ಸಾಗವಾನಿ ತಲಾ 11.73 ರೂ. ತಗಲುತ್ತಿದೆ. ಸುಮಾರು 394 ಚ.ಮೀ. ವ್ಯಾಪ್ತಿಯಲ್ಲಿ 300 ಚ.ಮೀ. ನೆರಳು ಪರದೆ ಹಾಗೂ ನೀರಾವರಿ ಸೌಲಭ್ಯ (ಪೈಪ್‌ಲೈನ್ ಮತ್ತು ಟ್ಯಾಂಕರ್) ಹಾಗೂ ನಾಮಫಲಕಗಳನ್ನು ಅಳವಡಿಸಿ ಸುಸಜ್ಜಿತ ನರ್ಸರಿ ಸಿದ್ಧವಾಗುತ್ತಿದೆ.
ತಾಲೂಕು ಪಂಚಾಯತಿ ನರೇಗಾ ಸಹಾಯಕ ನಿರ್ದೇಶಕÀ ಡಿ.ಇ.ದಿನೇಶ ಮಾತನಾಡಿ, ನರೇಗಾ ಯೋಜನೆಯಡಿ ತಾಲೂಕು ಪಂಚಾಯತಿ ಎನ್‌ಆರ್‌ಎಲ್‌ಎಮ್, ಅರಣ್ಯ ಹಾಗೂ ತೋಟಗಾರಿಕಾ ಇಲಾಖೆ ಸಹಯೋಗದಡಿ 2022-23ನೇ ಸಾಲಿನಡಿ ಸ್ವ- ಸಹಾಯ ಸಂಘಗಳ ಆರ್ಥಿಕ ಚಟುವಟಿಕೆಗಳನ್ನು ಬಲಪಡಿಸುವ ಉದ್ದೇಶದಿಂದ ಸರ್ಕಾರದ ನಿರ್ದೇಶನದಂತೆ ನರೇಗಾ ಯೋಜನೆಯಡಿ ನರ್ಸರಿ ಮೂಲಕ ಸಸಿ ಬೆಳೆಸುವ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ. ಸ್ವಸಹಾಯ ಸಂಘಗಳು ನರ್ಸರಿ ಬೆಳೆಸಿ ರೈತರು ಹಾಗು ವಿವಿಧ ಇಲಾಖೆಗಳಿಗೆ ಅವಶ್ಯವಿರುವ ಸರ್ಕಾರಿ ಯೋಜನೆಗಳಿಗೆ ಮತ್ತು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ. ಇದರಿಂದಾಗಿ ಜಿಪಿಎಲ್‌ಎಫ್ ಸದಸ್ಯರಿಗೆ ಹಾಗೂ ಸ್ಥಳೀಯರಿಗೆ ಸ್ಥಳೀಯವಾಗಿ ನಿರಂತರ ಉದ್ಯೋಗ ಮತ್ತು ಆರ್ಥಿಕ ಸಬಲೀಕರಣಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದರು.
ತಾಲೂಕು ಸಂಜೀವಿನಿ ಒಕ್ಕೂಟದ ನರ್ತನಕುಮಾರ ಮಾತನಾಡಿ, ಸಂಜೀವಿನಿ ಗ್ರಾಮ ಪಂಚಾಯತ್ ಒಕ್ಕೂಟಗಳ ಮೂಲಕ ಸಸಿಗಳನ್ನು ಬೆಳೆಸಿ ಮಹಿಳೆಯರಿಗೆ ಉದ್ಯೋಗ ಒದಗಿಸುವುದರೊಂದಿಗೆ ಅರಣ್ಯೀಕರಣ, ತೋಟಗಾರಿಕಾ ಪ್ರದೇಶ ವಿಸ್ತರಣೆ ಮಾಡುವುದು ಪ್ರಮುಖ ಉದ್ದೇಶವಾಗಿದೆ. ಇನ್ನು ಈ ನರ್ಸರಿಯಲ್ಲಿ 20ಕ್ಕೂ ಹೆಚ್ಚು ಸ್ವಸಹಾಯ ಸಂಘದ ಮಹಿಳೆಯರಿಗೆ ಜೀವನೋಪಾಯ ಒದಗಿಸಲಾಗಿದೆ ಎಂದರು.