ಶಿರಸಿ: ಉಲ್ಲಾಳ- ಗೇರಮನೆಯ ಹಿಕ್ಕುಂಡಿ ಶ್ರೀ ಕಪಿಲೇಶ್ವರ ದೇವರ ಸನ್ನಿಧಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಫೆ.18 ಶನಿವಾರ ರಾತ್ರಿ 9ಗಂಟೆಯಿಂದ ಶ್ರೀ ಅನಂತಪದ್ಮನಾಭ ಯಕ್ಷಗಾನ ಮಂಡಳಿ ಪೆರ್ಡೂರು ಇವರಿಂದ ‘ಬ್ರಹ್ಮಕಪಾಲ’ ಹಾಗೂ ‘ಚಂದ್ರಾವಳಿ ವಿಲಾಸ’ ಯಕ್ಷಗಾನ ಪ್ರದರ್ಶನವನ್ನು ಆಯೋಜಿಸಲಾಗಿದೆ.
ಕಳೆದ 5ವರ್ಷಗಳಿಂದ ಕಪಿಲೇಶ್ವರ ದೇವಾಲಯದ ಆವರಣದಲ್ಲಿ ಶಿವರಾತ್ರಿಯಂದು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು ಪ್ರಥಮ ವರ್ಷ ಕೀರ್ತನೆಯೊಂದಿಗೆ ಪ್ರಾರಂಭಿಸಿ, ನಂತರದಲ್ಲಿ ಯಕ್ಷಗಾನ ಕಾರ್ಯಕ್ರಮವನ್ನು ಆಯೋಜಿಸಿದ್ದು, ಈ ಬಾರಿಯೂ ಅಹೋರಾತ್ರಿ ಯಕ್ಷಗಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಂಜೆ 7.30ಕ್ಕೆ ಶಾಲಾ ಮಕ್ಕಳ ಕಾರ್ಯಕ್ರಮಗಳೊಂದಿಗೆ ಪ್ರಾರಂಭವಾಗಲಿದೆ.
ಕಳೆದ ಮೂರು ವರ್ಷಗಳಿಂದ ಸಾರ್ವಜನಿಕ ಸನ್ಮಾನ ನೆರವೇರಿಸಿಕೊಂಡು ಬಂದಿದ್ದು, 2021ರಲ್ಲಿ ಆಯುರ್ವೇದ ವೈದ್ಯ ಸುಬ್ರಹ್ಮಣ್ಯ ಶಾಸ್ತ್ರಿ ಮೋಟಿನಸರ ಇವರ ಅನುಪಮ ಸೇವೆ ಪರಿಗಣಿಸಿ ಸನ್ಮಾನ, ಹಾಗೆಯೇ 2022ರಲ್ಲಿ 300ವರ್ಷಗಳಿಂದ ಕಪಿಲೇಶ್ವರ ದೇವಾಲಯಕ್ಕೆ ಅನ್ನ ನೈವೇದ್ಯವನ್ನು ಸಲ್ಲಿಸುತ್ತಿರುವ ದೇವಾಲಯದ ಮೂಲ ಅರ್ಚಕ ಮನೆತನದವರನ್ನು ಸನ್ಮಾನಿಸಲಾಗಿತ್ತು.
ಅಂತೆಯೇ ಈ ವರ್ಷ ಗ್ರಾಮೀಣ ಭಾಗದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಹೆಸ್ಕಾಂ ಸಿಬ್ಬಂದಿ ಲೈನ್ ಮ್ಯಾನ್ ಲಕ್ಷ್ಮೀಕಾಂತ ನಾಯ್ಕ್ ಇವರಿಗೆ ಸಾರ್ವಜನಿಕ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಎಲ್ಲಾ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮ ಚಂದಗಾಣಿಸಿಕೊಡಲು ವ್ಯವಸ್ಥಾಪಕ ಸಮಿತಿ ಪ್ರಕಟಣೆಯಲ್ಲಿ ಕೋರಿದೆ.