ದಾಂಡೇಲಿ: ಹಳಿಯಾಳದಲ್ಲಿ ಶುಕ್ರವಾರ ನಡೆದ ಗಲಾಟೆಗೆ ಬಿಜೆಪಿ ಸರ್ಕಾರದಿಂದ ಆದೇಶ ಬಂದಿರಬೇಕು. ಎಲ್ಲರೂ ಸೌಹಾರ್ದತೆಯಿಂದ ಇರುವ ಹಳಿಯಾಳದಲ್ಲಿ ಕೆಲವರು ರಾಜಕೀಯ ಸಾಧನೆಗೆ ಶಾಂತಿ ಕದಡಲು ಹೊರಟಿದ್ದಾರೆ ಎಂದು ಮಾಜಿ ಸಚಿವ ಹಳಿಯಾಳ ಶಾಸಕ ಆರ್. ವಿ. ದೇಶಪಾಂಡೆ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಹಳಿಯಾಳದಲ್ಲಿ ಗ್ರಾಮ ದೇವಿ ದೇವಸ್ಥಾನ ಜಾಗದಲ್ಲಿ ಪುರಸಭೆ ಕಾಮಗಾರಿ ಮಾಡಲು ಹೊರಟಿರುವ ವಿಚಾರದಲ್ಲಿ ಬಂದ್ ಕರೆ ನೀಡಿರುವ ಬಗ್ಗೆ ತಿಳಿದಿತ್ತು. ತಕ್ಷಣ ನಾನು ಸಮಸ್ಯೆಯನ್ನ ಬಗೆಹರಿಸಿ, ಯಾವುದೇ ಗೊಂದಲ ಆಗದಂತೆ ಪುರಸಭೆ ಅಧ್ಯಕ್ಷ ಹಾಗೂ ಸಂಬಂಧಪಟ್ಟವರಿಗೂ ತಿಳಿಸಿದ್ದೆ.
ಆದರೆ ಏಕಾಏಕಿ ಕಾನೂನು ಕೈಗೆತ್ತಿಕೊಂಡು ಕೆಲವರು ಇಂಟರ್ ಲಾಕ್ ಗಳನ್ನು ಜೆಸಿಬಿ ಬಳಸಿ ತೆಗೆಯಲು ಪ್ರಾರಂಭಿಸಿದ್ದರು. ಪೊಲೀಸರು, ತಹಶೀಲ್ದಾರ್, ಚೀಫ್ ಆಫೀಸರ್ ಎಲ್ಲರೂ ಇದ್ದರು ಮೂಕ ಪ್ರೇಕ್ಷಕರಾಗಿ ನೋಡುತ್ತಿದ್ದು ಬಿಜೆಪಿ ಸರ್ಕಾರ ಆದೇಶ ಬಹುಶಃ ಎಲ್ಲರೂ ಸುಮ್ಮನಿರುವಂತೆ ಬಂದಿರಬೇಕು. ಅದಕ್ಕಾಗಿ ಎಲ್ಲಾ ಅಧಿಕಾರಿಗಳು ಸುಮ್ಮನಾಗಿದ್ದಾರೆ ಎಂದು ದೇಶಪಾಂಡೆ ಕಿಡಿಕಾರಿದ್ದಾರೆ.
ಇಂಟರ್ ಲಾಕ್ ಹಾಕುವ ಕಾಮಗಾರಿಗೆ ಅಡಿಗಲ್ಲನ್ನು ಹಾಕಿದ್ದೆ ಬಿಜೆಪಿ ಸದಸ್ಯ. ಹೋರಾಟಗಾರರ ಬೇಡಿಕೆ ಇಂಟರ್ ಲಾಕ್ ತೆಗೆಯಬೇಕು ಎನ್ನುವುದಿತ್ತು. ಚರ್ಚೆ ಮಾಡಿ ತೆಗೆದರೇ ಯಾವುದೇ ಸಮಸ್ಯೆ ಇರುತ್ತಿರಲಿಲ್ಲ. ಆದರೆ ಚುನಾವಣೆ ಹತ್ತಿರಬರುತ್ತಿದ್ದು ರಾಜಕೀಯಕ್ಕಾಗಿ ಇಂತಹ ಕೃತ್ಯ ಕೆಲವರು ಮಾಡಿದ್ದಾರೆ ಎಂದು ದೇಶಪಾಂಡೆ ಹೇಳಿದ್ದಾರೆ. ರಾಜ್ಯದಲ್ಲಿ, ಜಿಲ್ಲೆಯಲ್ಲಿ ಹಿಂದೂ ಮುಸ್ಲೀಂ ಸೌಹಾರ್ದತೆಯಿಂದ ಇದ್ದಾರೆ. ಚುನಾವಣೆಯಲ್ಲಿ ಈ ಸೌಹಾರ್ದತೆ ಕೆಡೆಸಲು ಕೆಲವರು ತಂತ್ರ ಮಾಡುತ್ತಿದ್ದಾರೆ. ಕೆಲ ಸಂಘಟನೆಗಳು ಕಲುಷಿತ ವಾತಾವರಣ ಮಾಡಲು ಪ್ರಯತ್ನ ಮಾಡುತ್ತಿದ್ದು ಜನ ಇದಕ್ಕೆ ಒಪ್ಪುವುದಿಲ್ಲ. ಸರ್ಕಾರ ಈ ಬಗ್ಗೆ ಮಧ್ಯ ಪ್ರವೇಶ ಮಾಡಬೇಕಿತ್ತು. ಇನ್ನು ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಅಧಿಕಾರಿಗಳ ಮುಂದೆಯೇ ಇಂತಹ ಕೃತ್ಯ ಮಾಡಿದ್ದು ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೇ ಏನು ನಿದ್ದೆ ಮಾಡುತ್ತಿದ್ದಾರಾ. ಈ ಘಟನೆ ತನ್ನ ಮನಸ್ಸಿಗೆ ನೋವು ತಂದಿದೆ ಎಂದು ದೇಶಪಾಂಡೆ ಹೇಳಿದ್ದಾರೆ.
ರಾಜಕೀಯಕ್ಕಾಗಿಯೇ ಇಂತಹ ಕೃತ್ಯ ಮಾಡುವುದು ಸರಿಯಾದುದ್ದಲ್ಲ. ಅಧಿಕಾರಿಗಳು ಕಾನೂನು ಕೈಗೆತ್ತಿಕೊಂಡವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ದೇಶಪಾಂಡೆ ಆಗ್ರಹಿಸಿದ್ದಾರೆ.