• Slide
    Slide
    Slide
    previous arrow
    next arrow
  • ಅತಿಕ್ರಮಣದಾರರ ಹೋರಾಟ: ಕಣಕ್ಕಿಳಿದ ರವೀಂದ್ರ ನಾಯ್ಕ ಪುತ್ರಿ ರಂಜಿತಾ

    300x250 AD

    ಸಿದ್ದಾಪುರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇಲ್ಲಿಯ ವರೆಗೂ ಬಗೆಹರಿಯದ ಅತಿದೊಡ್ಡ ಸಮಸ್ಯೆ ಅತಿಕ್ರಮಣದಾರರ ಸಮಸ್ಯೆ. ಕಳೆದ ಹಲವು ವರ್ಷಗಳಿಂದ ಭೂಮಿಯ ಹಕ್ಕಿಗಾಗಿ ಹೋರಾಟಗಾರ ರವೀಂದ್ರ ನಾಯ್ಕ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಾ ಬಂದಿದ್ದರು ಸರ್ಕಾರ ಮಾತ್ರ ಇಂದಿಗೂ ಸಮಸ್ಯೆ ಬಗೆಹರಿಸಿಲ್ಲ. ಇದೀಗ ಅತಿಕ್ರಮಣದಾರರ ಹೋರಾಟಕ್ಕೆ ರವೀಂದ್ರ ನಾಯ್ಕ ಪುತ್ರಿ ಕಾನೂನು ವಿದ್ಯಾರ್ಥಿನಿ ರಂಜಿತಾ ಸಹ ಎಂಟ್ರಿ ಕೊಟ್ಟು ತಂದೆ ಸಾಥ್ ನೀಡುವ ಮೂಲಕ ಗಮನ ಸೆಳೆದಿದ್ದಾರೆ.

    ಜಿಲ್ಲೆಯಲ್ಲಿ ಸುಮಾರು 85 ಸಾವಿರ ಕುಟುಂಬಗಳು ಅರಣ್ಯ ಅತಿಕ್ರಮಣದಾರರಿದ್ದು ತಮ್ಮ ಭೂಮಿ ಹಕ್ಕಿಗಾಗಿ ನಿರಂತರ ಹೋರಾಟವನ್ನು ಮಾಡುತ್ತಲೇ ಬಂದಿದ್ದಾರೆ. ವಕೀಲ ರವೀಂದ್ರ ನಾಯ್ಕ ಕಳೆದ 32 ವರ್ಷಗಳಿಂದ ಅತಿಕ್ರಮಣದಾರರ ಪರ ಅರಣ್ಯ ಅತಿಕ್ರಮಣದಾರರ ಹೋರಾಟ ಸಮಿತಿಯನ್ನ ಕಟ್ಟಿಕೊಂಡು ಸರ್ಕಾರಕ್ಕೆ ನ್ಯಾಯ ಕೊಡುವಂತೆ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಮುರುಡೇಶ್ವರದಿಂದ ಕಾರವಾರಕ್ಕೆ ಪಾದಯಾತ್ರೆ ಸೇರಿ ಒಟ್ಟು ಈ ವರೆಗೆ ಅತಿಕ್ರಮಣದಾರರ ಪರ 11 ಪಾದಯಾತ್ರೆಗಳನ್ನು ರವೀಂದ್ರ ನಾಯ್ಕ ಮಾಡಿದ್ದು, 7 ಬಾರಿ ಅಧಿವೇಶನ ವೇಳೆ ಬೆಳಗಾವಿ ಹಾಗೂ ಬೆಂಗಳೂರು ಚಲೋ ಹೋರಾಟವನ್ನು ಸಹ ಮಾಡಿದ್ದಾರೆ. ಇದಲ್ಲದೇ ರಾಜ್ಯದ ನಾನಾ ಭಾಗ ಸೇರಿ ಒಟ್ಟು 9 ಬಾರಿ ರಾಜ್ಯ ಮಟ್ಟದ ಸಮಾವೇಶ, ಅರಣ್ಯವಾಸಿ ಉಳಿಸಿ ಹೋರಾಟದ ಅಂಗವಾಗಿ ವಾಹನವೊಂದನ್ನು ಮಾಡಿ ಇಡೀ ಜಿಲ್ಲೆಯಲ್ಲಿ ಜನಜಾಗೃತಿ ಕಾರ್ಯಕ್ರಮ ಸೇರಿ ಹತ್ತು ಹಲವು ಹೋರಾಟ ಮಾಡಿಕೊಂಡು ಬಂದಿದ್ದಾರೆ.

    ಅಲ್ಲದೇ ಜಿಲ್ಲೆಯ ಯಾವುದೇ ಭಾಗದಲ್ಲಿ ಅರಣ್ಯ ಅತಿಕ್ರಮಣದಾರರ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿಗಳು ದಾಳಿ ನಡೆಸಿದ ವೇಳೆಯಲ್ಲಿ ಅವರ ಪರ ನ್ಯಾಯಕ್ಕಾಗಿ ಹೋರಾಟವನ್ನ ಮಾಡುತ್ತಾ ಬಂದಿದ್ದು ಇಡೀ ಜಿಲ್ಲೆ ಮಾತ್ರವಲ್ಲದೇ ರಾಜ್ಯ ಮಟ್ಟದ ಹಲವು ನಾಯಕರುಗಳು, ಜನಸಾಮಾನ್ಯರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಸದ್ಯ ರವೀಂದ್ರ ನಾಯ್ಕ ಅವರ ಹೋರಾಟಕ್ಕೆ ಅವರ ಪುತ್ರಿ ರಂಜಿತಾ ರವೀಂದ್ರ ಸಹ ಸಾಥ್ ಕೊಡಲು ಪ್ರಾರಂಭಿಸಿದ್ದಾರೆ. ಬೆಂಗಳೂರಿನಲ್ಲಿ ಕಾನೂನು ವಿದ್ಯಾಭ್ಯಾಸ ಮಾಡುತ್ತಿರುವ ರಂಜಿತಾ ಕಳೆದ ಎರಡು ವರ್ಷಗಳಿಂದ ತಂದೆ ಹೋರಾಟಕ್ಕೆ ಸಾಥ್ ನೀಡಲು ಮುಂದಾಗಿದ್ದಾರೆ. ಕರಪತ್ರ ತಯಾರಿ, ಸಾಮಾಜಿಕ ಜಾಲತಾಣಗಳ ಮೂಲಕ ಜಾಗೃತಿ ಮೂಡಿಸುವುದು ಹೀಗೆ ಹಲವು ಕಾರ್ಯದಲ್ಲಿ ತೊಡಗಿದ್ದ ರವೀಂದ್ರ ನಾಯ್ಕ ಪುತ್ರಿ ಸದ್ಯ ಹೋರಾಟವನ್ನು ಸಹ ಪ್ರಾರಂಭಿಸಿದ್ದಾರೆ.

    ಬೆಂಗಳೂರಿನಲ್ಲಿ ನಡೆದ ಅರಣ್ಯ ವಾಸಿಗಳ ವಿಧಾನಸೌದಾ ಚಲೋ ಹೋರಾಟದಲ್ಲಿ ಪಾಲ್ಗೊಂಡು ಜನರ ನ್ಯಾಯವನ್ನು ಕೊಡುವಂತೆ ಸರ್ಕಾರಕ್ಕೆ ಆಗ್ರಹಿಸಲು ಪ್ರಾರಂಭಿಸಿದ್ದಾರೆ. ವಿದ್ಯಾರ್ಥಿ ಜೀವನದಿಂದ ಹೋರಾಟದ ಆಸಕ್ತಿ ಹೊಂದಿರುವ ಹಿನ್ನಲೆಯಲ್ಲಿ ತಂದೆ ಸಹ ಮಗಳಿಗೆ ಬೆಂಬಲವನ್ನ ನೀಡುತ್ತಿದ್ದು, ಇನ್ನು ಪುತ್ರಿ ಸಹ ಜಿಲ್ಲೆಯ ಅತಿಕ್ರಮಣದಾರರ ಪರ ಹೋರಾಟ ನಡೆಸುತ್ತಿರುವುದು ಹೋರಾಟದಲ್ಲಿ ಪಾಲ್ಗೊಂಡ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಹೋರಾಟ ಜ್ಞಾನಕ್ಕಾಗಿಯೇ ಕಾನೂನು ವಿದ್ಯಾಭ್ಯಾಸಕ್ಕೆ ಅವಕಾಶ

    300x250 AD

    ತಾನು ವಕೀಲನಾದ ನಂತರ ಜನರ ನೋವಿಗೆ ಸ್ಪಂದಿಸುವ ಅರಿವು ಬಂದಿದ್ದು ಕಾನೂನು ಮೂಲಕವೇ ಹೋರಾಟವನ್ನು ಪ್ರಾರಂಭಿಸಿದ್ದೇನೆ. ನನ್ನ ಹೋರಾಟಕ್ಕೆ ವೃತ್ತಿ ಸಹ ಸಹಕಾರಿಯಾಗಿತ್ತು. ಇದೇ ನಿಟ್ಟಿನಲ್ಲಿ ನನ್ನ ಮಗಳಿಗೂ ಕಾನೂನು ವಿದ್ಯಾಭ್ಯಾಸಕ್ಕೆ ಅವಕಾಶ ಮಾಡಿಕೊಟ್ಟಿದ್ದೇನೆ ಎಂದು ರವೀಂದ್ರ ನಾಯ್ಕ ಅಭಿಪ್ರಾಯ ಪಟ್ಟಿದ್ದಾರೆ.

    ಅರಣ್ಯ ಅತಿಕ್ರಮಣದಾರರು ಯಾರು ಶ್ರೀಮಂತರಲ್ಲ. ಎಲ್ಲರೂ ಹೊಟ್ಟೆ ಪಾಡಿಗಾಗಿ ಸಣ್ಣ ಸಣ್ಣ ಭೂಮಿಯನ್ನ ಒತ್ತುವರಿ ಮಾಡಿಕೊಂಡು ಮನೆಗಳನ್ನು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಅವರಿಗೆ ನ್ಯಾಯ ಕೊಡಿಸುವುದು ದೇವರ ಕೆಲಸವಿದ್ದಂತೆ. ಈ ನಿಟ್ಟಿನಲ್ಲಿ 32 ವರ್ಷಗಳಿಂದ ಹೋರಾಟ ನಡೆಸುತ್ತಿದ್ದೇನೆ.

    ಅರಣ್ಯ ಅತಿಕ್ರಮಣದಾರರ ಪರ ಹೋರಾಟ ಜಿಲ್ಲೆಯಲ್ಲಿ ನನ್ನ ಕಾಲಕ್ಕೆ ಅಂತ್ಯವಾಗಬಾರದು. ನನ್ನ ಮಗಳು ಈ ಹೋರಾಟವನ್ನು ಮುಂದುವರೆಸಬೇಕು ಎನ್ನುವುದು ನನ್ನ ಆಸಕ್ತಿ. ಈ ನಿಟ್ಟಿನಲ್ಲಿ ಆಕೆ ಸಹ ಹೋರಾಟಕ್ಕೆ ಬರುತ್ತಿರುವುದು ನನಗೆ ಖುಷಿ ನೀಡಿದೆ ಎನ್ನುತ್ತಾರೆ ರವೀಂದ್ರ ನಾಯ್ಕ.

    Share This
    300x250 AD
    300x250 AD
    300x250 AD
    Leaderboard Ad
    Back to top