ಶಿರಸಿ: ಜನಸೇವೆ ಮಾಡಲು ಜನಪ್ರತಿನಿಧಿಯೆ ಆಗಬೇಕಿಲ್ಲ. ನಿಸ್ವಾರ್ಥ ಭಾವನೆಯೊಂದೆ ಸಾಕು. ಆ ನಿಟ್ಟಿನಲ್ಲಿ ಕಳೆದ ಅನೇಕ ವರ್ಷಗಳಿಂದ ಯಾವುದೇ ಫಲಾಪೇಕ್ಷೆ ಇಲ್ಲದೆ ಶಿರಸಿ- ಸಿದ್ದಾಪುರ ಜನತೆಯ ಸೇವೆ ಮಾಡಿದ್ದೇನೆ. ಜನ ಅವಕಾಶ ನೀಡಿದರೆ ಜನಪ್ರತಿನಿಧಿಯಾಗಿ ಇನ್ನೂ ಹೆಚ್ಚಿನ ಸೇವೆ ಮಾಡುತ್ತೇನೆ ಎಂದು ಶಿರಸಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಉಪೇಂದ್ರ ಪೈ ತಿಳಿಸಿದರು.
ಜೆ.ಡಿ.ಎಸ್ ಪ್ರಮುಖ ಎಚ್.ಡಿ.ಕುಮಾರ್ ಸ್ವಾಮಿ ಜೊತೆ ಮಾತುಕತೆ ನಡೆಸಿದ್ದು ನಿಜ. ಅವರು ಕೂಡ ಶಿರಸಿ- ಸಿದ್ದಾಪುರ ಕ್ಷೇತ್ರದ ಟಿಕೆಟ್ ನೀಡುವ ಭರವಸೆ ನೀಡಿದ್ದು ನಿಜ. ಆದರೆ ನನ್ನ ಎಲ್ಲಾ ಹಿತೈಷಿಗಳು, ಅಭಿಮಾನಿಗಳ ಅಭಿಪ್ರಾಯ ಪಡೆದು ನನ್ನ ನಿರ್ಧಾರ ಸಧ್ಯವೇ ತಿಳಿಸುತ್ತೇನೆ ಎಂದರು.
ಇದುವರೆಗೆ ಯಾವುದೇ ಜನಪ್ರತಿನಿಧಿಯಾಗದೆ ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳಿಗೆ 40 ಲಕ್ಷಕ್ಕೂ ಅಧಿಕ ಹಣದ ನೆರವನ್ನು ನೀಡುತ್ತಿದ್ದೇನೆ. ಕಲೆ, ನಾಟಕ, ಯಕ್ಷಗಾನ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಲಕ್ಷಾಂತರ ರೂಪಾಯಿ ದೇಣಿಗೆ ನೀಡುತ್ತೇನೆ. ಆದರೆ ಇದರಲ್ಲಿ ಯಾವುದೇ ಸ್ವಾರ್ಥವಿಲ್ಲ ಎಂದರು. ಈ ಹಿಂದಿನಿಂದಲೂ ಅನೇಕ ನನ್ನ ಹಿತೈಷಿಗಳು ಚುನಾವಣೆ ನಿಲ್ಲುವಂತೆ ಬಲವಂತ ಮಾಡಿದ್ದರು. ಆದರೆ ನಾನು ಮಾತ್ರ ನಿರಾಕರಿಸಿದ್ದೆ. ಈಗ ರಾಜಕೀಯ ಪ್ರವೇಶಕ್ಕೆ ಸಯೋಗ ಕೂಡಿ ಬಂದಿದೆ. ಶಿರಸಿ- ಸಿದ್ದಾಪುರ ಕ್ಷೇತ್ರದ ಜನತೆ ಅಭಯ ಹಸ್ತ ನೀಡಿದರೆ ಖಂಡಿತ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ ಎಂದರು.