ಅಂಕೋಲಾ: ಕಾರವಾರದ ಉದ್ಯಮಿ, ಮಾತ್ರೋಶ್ರೀ ಸರೋಜ ಬಾಳಾ ದೇಸಾಯಿ ಟ್ರಸ್ಟಿನ ಅಧ್ಯಕ್ಷ ನರೇಂದ್ರ ದೇಸಾಯಿಯವರಿಗೆ ಶಾಂತಿನಿಕೇತನ ಟ್ರಸ್ಟಿನ ‘ಶಾಂತಿನಿಕೇತನ ಗೌರವ ಪ್ರಶಸ್ತಿ’ಯನ್ನು ನೀಡಿ ಗೌರವಿಸಿದರು.
ಜೈಹಿಂದ್ ಮೈದಾನದಲ್ಲಿ ಇತ್ತೀಚೆಗೆ ನಡೆದ ಶಾಂತಿನಿಕೇತನ ಪೂರ್ವ ಪ್ರಾಥಮಿಕ ಶಾಲೆಯ 8ನೇ ವಾರ್ಷಿಕೋತ್ಸವದ ಶಾಂತಿನಿಕೇತನ ಮಕ್ಕಳ ಹಬ್ಬದ ಸಮಾರಂಭದಲ್ಲಿ ಶಾಂತಿನಿಕೇತನ ಟ್ರಸ್ಟಿನ ಅಧ್ಯಕ್ಷ ತಿಮ್ಮಣ್ಣ ನಾಯಕ, ಕಾರ್ಯದರ್ಶಿ ಶಾಂತಿ ನಾಯಕರವರು ನರೇಂದ್ರ ದೇಸಾಯಿಯವರಿಗೆ ಸನ್ಮಾನ ಮಾಡಿ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು.
ಗೌರವ ಸ್ವೀಕರಿಸಿ ಮಾತನಾಡಿದ ನರೇಂದ್ರ ದೇಸಾಯಿ, ಸಮಾಜದ ಏಳ್ಗೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಮಕ್ಕಳ ಭವಿಷ್ಯವನ್ನು ರೂಪುಗೊಳಿಸಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರಭು ಮೆಡಿಕಲ್ ದೇವಿದಾಸ್ ಪ್ರಭು ಮಾತನಾಡಿ, ವಿದ್ಯಾರ್ಥಿಗಳನ್ನು ಒಳ್ಳೆಯ ನಾಗರಿಕರನ್ನಾಗಿ ಮಾಡುವುದು ಪಾಲಕರ ಕೆಲಸವೆಂದರು. ಮತ್ತೋರ್ವ ಅತಿಥಿಗಳಾಗಿ ಆಗಮಿಸಿದ ರೂರಲ್ ರೋಟರಿ ಕ್ಲಬ್ ಅಧ್ಯಕ್ಷ ರಾಘವೇಂದ್ರ ಭಟ್ ಮಾತನಾಡಿ, ವಿದ್ಯಾರ್ಥಿಗಳು ಕಲಿಕೆಯಲ್ಲಷ್ಟೇ ಪ್ರಗತಿ ಸಾಧಿಸದೆ ಸರ್ವತೋಮುಖ ಪ್ರಗತಿ ಸಾಧಿಸಬೇಕು ಎಂದರು.
ಸಂಸ್ಥೆಯ ಮುಖ್ಯಸ್ಥರಾದ ಡಾ.ಸಂಜು ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದಲ್ಲಿ ಶ್ವೇತಾ ನಾಯಕ, ಡಾ.ಸಮೀರ್‌ಕುಮಾರ್ ನಾಯಕ, ಅರ್ಪಿತಾ ನಾಯಕ ಉಪಸ್ಥಿತರಿದ್ದರು. ಶ್ರದ್ಧಾ ಆಚಾರ್ಯ ಕಾರ್ಯಕ್ರಮ ನಿರೂಪಣೆ ಮಾಡಿದರು. ಮಮತಾ ನಾಯ್ಕ್ ವಂದನಾರ್ಪಣೆ ಮಾಡಿದರು. ಶಿಕ್ಷಕಿಯರಾದ ಶೀತಲ್ ನಾಯ್ಕ್, ಸಂಜೀವಿನಿ ಗಾವಂಕರ್, ಲಕ್ಷ್ಮೀ ಕಾರ್ಯಕ್ರಮಕ್ಕೆ ಸಹಕರಿಸಿದರು. ವೇದಿಕೆಯ ಕಾರ್ಯಕ್ರಮದ ನಂತರ ಶಾಲಾ ವಿದ್ಯಾರ್ಥಿಗಳಿಂದ ಮನರಂಜನೆ ಕಾರ್ಯಕ್ರಮ ನಡೆಯಿತು. ಪುಟಾಣಿ ಮಕ್ಕಳು ವಿವಿಧ ನೃತ್ಯಗಳನ್ನು ಮಾಡುವ ಮೂಲಕ ಜನರ ಮನಸೊರೆಗೊಂಡರು.