ಕಾರವಾರ: ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಕಾರವಾರ ಅಂಕೋಲಾ ಕ್ಷೇತ್ರದಿಂದ ಕಣಕ್ಕೆ ಇಳಿಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಜೆಡಿಎಸ್ ಪಕ್ಷದಿಂದಲೇ ಕಣಕ್ಕೆ ಇಳಿಯಲು ಚಿಂತನೆ ನಡೆಸಿದ್ದು ಮಾರ್ಚ್ ಮೊದಲ ವಾರದಲ್ಲಿ ಕಾರವಾರ ಅಂಕೋಲಾ ತಾಲೂಕಿನಲ್ಲಿ ಪಂಚರತ್ನ ರಥಯಾತ್ರೆ ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯಲಿದೆ ಎನ್ನಲಾಗಿದೆ.
ಕಾರವಾರ ಅಂಕೋಲಾ ಕ್ಷೇತ್ರದಿಂದ ಕಳೆದ ಬಾರಿ ಜೆಡಿಎಸ್ ಪಕ್ಷದಿಂದ ಕಣಕ್ಕೆ ಇಳಿದಿದ್ದ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಸೋಲನ್ನು ಕಂಡಿದ್ದರು. ಅದಾದ ನಂತರ ಲೋಕಸಭಾ ಚುನಾವಣೆಯಲ್ಲಿ ಕೆನರಾ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲನ್ನು ಕಂಡಿದ್ದರು. ಇನ್ನು ಕ್ಷೇತ್ರದಲ್ಲಿ ಜೆಡಿಎಸ್ ನೆಲೆ ಇಲ್ಲ ಅನ್ನುವ ಕಾರಣಕ್ಕೆ ಪಕ್ಷೇತರವಾಗಿ ಕಣಕ್ಕೆ ಇಳಿಯುವ ಚಿಂತನೆಯನ್ನು ಆನಂದ್ ಅಸ್ನೋಟಿಕರ್ ಮಾಡಿದ್ದರು. ಆದರೆ ಚುನಾವಣೆ ಸಮೀಪಿಸುತ್ತಿದ್ದರು ರಾಜಕೀಯ ಅಖಾಡಕ್ಕೆ ಇಳಿಯದೇ ಮೌನವಾಗಿಯೇ ಆನಂದ್ ಉಳಿದಿದ್ದರು. ಆನಂದ್ ಅಸ್ನೋಟಿಕರ್ ಬಿಜೆಪಿ ಅಥವಾ ಕಾಂಗ್ರೆಸ್ ಪಕ್ಷಕ್ಕೆ ಸೇರುವ ಸಾಧ್ಯತೆ ಇದೆ ಎಂದು ಸಹ ಹೇಳಲಾಗಿತ್ತು. ಇತ್ತಿಚ್ಚಿಗೆ ಖಾಸಗಿ ಚಾನೆಲ್ನಲ್ಲಿ ನಡೆದ ಮತದಾನೋತ್ತರ ಸಮೀಕ್ಷೆ ಹಿನ್ನಲೆಯಲ್ಲಿ ತಾನು ಚುನಾವಣಾ ಅಖಾಡಕ್ಕೆ ಇಳಿಯುವುದು ಇನ್ನು ನಿರ್ಧರಿಸಿಲ್ಲ, ಸಮೀಕ್ಷೆಯಲ್ಲಿ ತನ್ನ ಹೆಸರು ತೆಗೆಯಿರಿ ಎನ್ನುವ ಹೇಳಿಕೆ ನೀಡುವ ಮೂಲಕ ಬೆಂಬಲಿಗರ ಅಸಮಾಧಾನಕ್ಕೆ ಸಹ ಕಾರಣವಾಗಿದ್ದರು.
ಸದ್ಯ ಕ್ಷೇತ್ರದಲ್ಲಿ ಬೆಂಬಲಿಗರ ಜೊತೆ ಚರ್ಚಿಸಿರುವ ಆನಂದ್ ಅಸ್ನೋಟಿಕರ್ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಜೆಡಿಎಸ್ ಪಕ್ಷದಿಂದಲೇ ಕಣಕ್ಕೆ ಇಳಿಯುವುದಕ್ಕೆ ಆನಂದ್ ನಿರ್ಧರಿಸಿದ್ದಾರೆ ಎನ್ನಲಾಗಿದ್ದು ಈ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಬಳಿ ಸಹ ಮಾತನಾಡಿದ್ದಾರೆ ಎನ್ನಲಾಗಿದೆ. ಇನ್ನು ಮೂರ್ನಾಲ್ಕು ದಿನದಲ್ಲಿ ಚುನಾವಣಾ ಅಖಾಡಕ್ಕೆ ಆನಂದ್ ದುಮುಕಳಿದ್ದು, ಮಾರ್ಚ್ ಮೊದಲ ವಾರದಲ್ಲಿ ಎರಡು ಅಥವಾ ಮೂರು ದಿನಗಳ ಕಾಲ ಕಾರವಾರ ಹಾಗೂ ಅಂಕೋಲಾ ತಾಲೂಕಿನಲ್ಲಿ ಪಂಚರತ್ನ ರಥಯಾತ್ರೆ ಮೂಲಕ ಸ್ವತಹ ಮಾಜಿ ಸಿಎಂ ಕುಮಾರಸ್ವಾಮಿಯವರೇ ಆನಂದ್ ಪರ ಪ್ರಚಾರಕ್ಕೆ ಆಗಮಿಸುತ್ತಿದ್ದಾರೆ ಎನ್ನಲಾಗಿದೆ.
ಆನಂದ್ ನನ್ನ ಆತ್ಮೀಯ ಸ್ನೇಹಿತ: ಕುಮಾರಸ್ವಾಮಿ
ಆನಂದ್ ಅಸ್ನೋಟಿಕರ್ ಬೇರೆ ಯಾರು ಅಲ್ಲ, ಆತ ತನ್ನ ಆತ್ಮೀಯ ಸ್ನೇಹಿತ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಕುಮಟಾದಲ್ಲಿ ಈ ಸಂಬoಧ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಆನಂದ್ ಅಸ್ನೋಟಿಕರ್ ಚುನಾವಣಾ ಅಖಾಡಕ್ಕೆ ಇಳಿಯಲಿದ್ದಾರೆ. ಕೆಲ ಗೊಂದಲಗಳು ಅವರಿಗಿದ್ದು, ನನ್ನ ಬಳಿ ಹೇಳಿಕೊಂಡಿದ್ದಾರೆ. ಎಲ್ಲಾ ಸಮಸ್ಯೆ ಬಗೆಹರಿಸುವ ಬಗ್ಗೆ ತಿಳಿಸಿದ್ದು ಇನ್ನು ಮೂರ್ನಾಲ್ಕು ದಿನದಲ್ಲಿ ಏನೆಂದು ನಿರ್ಧರಿಸಲಿದ್ದಾರೆ. ಕ್ಷೇತ್ರದಲ್ಲಿ ಅವರ ಗೆಲುವಿಗಾಗಿ ತಾನು ಪ್ರಚಾರ ಕಾರ್ಯದಲ್ಲಿ ತೊಡಗುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಇನ್ನು ಹಳಿಯಾಳ ಕ್ಷೇತ್ರದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಎಲ್.ಘೋಟ್ನೇಕರ್ ಜೆಡಿಎಸ್ ಸೇರ್ಪಡೆ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷರ ಜೊತೆ ಚರ್ಚೆ ನಡೆದಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.