ಅಂಕೋಲಾ: ಒಂದು ದೇಶ ಅಭಿವೃದ್ಧಿಯಾಗಬೇಕಾದರೆ ಕೃಷಿ ಪ್ರದಾನವಾಗಿರಬೇಕು. ಆದರೆ ಭಾರತದಲ್ಲಿ ಕೃಷಿಗೆ ಹೆಚ್ಚಿನ ಮಹತ್ವ ನೀಡದ ಹಿನ್ನೆಲೆಯಲ್ಲಿ ಕೆಲವರು ವಿಮುಖರಾಗುತ್ತಿದ್ದಾರೆ. ಈಗ ವಿದ್ಯುತ್ ಮಸೂದೆ ಜಾರಿಗೊಳಿಸಲು ಹೊರಟಿರುವುದು ಕೃಷಿಕರನ್ನು ಬಲಿಕೊಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಬೃಹತ್ ಹೋರಾಟಗಳನ್ನು ಹಮ್ಮಿಕೊಂಡಿದ್ದೇವೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಯಶ್ವಂತ ಹೇಳಿದರು.
ಕರ್ನಾಟಕ ಪ್ರಾಂತ ರೈತ ಸಂಘ, ನೀರಾವರಿ ವಿದ್ಯುತ್ ಪಂಪ್‌ಸೆಟ್ ಬಳಕೆದಾರರ ಸಂಘದ ಆಶ್ರಯದಲ್ಲಿ ವಿದ್ಯುತ್ ಖಾಸಗೀಕರಣ ಮತ್ತು ಕೃಷಿ ಪಂಪ್‌ಸೆಟ್‌ಗಳಿಗೆ ಫ್ರಿ ಪೇಯ್ಡ್ ಮೀಟರ್ ಅಳವಡಿಕೆ ವಿರೋಧಿಸಿ ಪಟ್ಟಣದಲ್ಲಿ ಬುಧವಾರ ಹಮ್ಮಿಕೊಂಡ ತಾಲೂಕು ಮಟ್ಟದ ನೀರಾವರಿ ಪಂಪ್‌ಸೆಟ್ ವಿದ್ಯುತ್ ಬಳಕೆದಾರರ ಸಮಾವೇಶದಲ್ಲಿ ಅವರು ಮಾತನಾಡಿದರು.
ಬಿಜೆಪಿಯವರು ಬಾಯಿ ತೆಗೆದರೆ ಶ್ರೀರಾಮನ ಬಗ್ಗೆ ಮಾತನಾಡುತ್ತಾರೆ. ಶ್ರೀರಾಮ ತನ್ನ ತಂದೆಯ ಮಾತಿನಂತೆ ನಡೆದುಕೊಂಡರೆ, ಅವರ ಬಗ್ಗೆ ಮಾತನಾಡುವ ಪ್ರಧಾನಿ ನರೇಂದ್ರ ಮೋದಿಯವರು ಜಿಲ್ಲೆಯಲ್ಲಿ ನಡೆದ ಕೃಷಿ ಮಸೂದೆ ವಾಪಸ್ ಪಡೆಯುವ ಪ್ರತಿಭಟನೆಯಲ್ಲಿ ಲಿಖಿತವಾಗಿ ನೀಡಿದ ಭರವಸೆಯಲ್ಲಿ ರೈತ ಸಂಘವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳವುದಿಲ್ಲ ಎಂದಿದ್ದರು. ಆದರೆ ಈಗ ಮತ್ತೆ ವಿದ್ಯುತ್ ಖಾಸಗೀಕರಣ ಮಾಡಲು ಮುಂದಾಗಿ ಮೋದಿಯವರು ವಚನಭೃಷ್ಟರಾಗಿದ್ದಾರೆ.
ಕೇಂದ್ರ ಸರಕಾರ ಜಾರಿಗೊಳಿಸಲು ಹೊರಟಿರುವ ವಿದ್ಯುತ್ ಮಸೂದೆಯನ್ನು ವಿರೋಧಿಸಿ ಕೇರಳ, ತೆಲಂಗಾಣ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ. ಬಿಹಾರ, ತಮಿಳುನಾಡು ಸರಕಾರಗಳು ವಿರೋಧಿಸಿದೆ. ಆದರೆ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರೋಧಿಸದೇ ಮೌನವಾಗಿದ್ದು ಬೆಂಬಲಿಸುತ್ತಿದ್ದಾರೆ. ಇವರೊಬ್ಬ ಬೆನ್ನುಮೂಳೆ ಇಲ್ಲದ ಮುಖ್ಯಮಂತ್ರಿಯಾಗಿದ್ದು, ಬೊಂಬೆಯ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಟಿ.ಯಶ್ವಂತ ವಿವರಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತಾರಾಮ ನಾಯಕ ಮಾತನಾಡಿ, ಖಾಸಗಿ ಕಂಪನಿಯವರಿಗೆ ಲಾಭ ಮಾಡಿಕೊಡಲು ನರೇಂದ್ರ ಮೋದಿ ನೇತೃತ್ವದ ಸರಕಾರ ರೈತರ ಬದುಕನ್ನು ಕಸಿದುಕೊಳ್ಳುತ್ತಿದೆ. ಕೃಷಿಗೆ ಶೇ 17ರಷ್ಟು ಮಾತ್ರ ವಿದ್ಯುತ್ ಬಳಕೆಯಾಗುತ್ತದೆ. ಲಕ್ಷಾಂತರ ರೈತರು ಉಚಿತ ವಿದ್ಯುತ್‌ನಿಂದಾಗಿ ತಮ್ಮ ಕೃಷಿಯನ್ನು ಮಾಡಿ ದೇಶ ಹಾಗೂ ವಿದೇಶಕ್ಕೆ ಆಹಾರ ನೀಡುತ್ತಿದ್ದರು. ಕೋವಿಡ್‌ನಂತಹ ಪರಿಸ್ಥಿತಿಯಲ್ಲಿಯೂ ಕೂಡ ಭಾರತ ಸ್ವಾವಲಂಬಿಯಾಗಿ ಬದುಕಿದೆ. ಹೀಗಾಗಿ ಫೆ.16ರಂದು ಬೆಂಗಳೂರಿನಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.
ಅಗಸೂರು ಗ್ರಾ.ಪಂ ಅಧ್ಯಕ್ಷ ರಾಮಚಂದ್ರ ಡಿ.ನಾಯ್ಕ ಮಾತನಾಡಿ, ಈಗ ಮನೆಗೆ ಬರುವ ವಿದ್ಯುತ್ ಬಿಲ್ ಅಧಿಕವಾಗಿದೆ. ಇದನ್ನೇ ಕಟ್ಟಲು ಜನರು ಪರಿತಪಿಸುವಾಗ ಇನ್ನು ಕೃಷಿ ಪಂಪ್‌ಸೆಟ್‌ಗಳನ್ನು ಖಾಸಗೀಕರಣಗೊಳಿಸಿದರೆ ರೈತರು ಬೀದಿಗೆ ಬೀಳಲಿದ್ದಾರೆ. ರೈತರ ಅಭಿವೃದ್ಧಿ ನೋಡುವುದನ್ನು ಬಿಟ್ಟು ಕೇಂದ್ರ ಸರಕಾರ ಕೇವಲ ಉದ್ದಿಮೆಗಳಿಗೆ ಅನುಕೂಲ ಮಾಡಿಕೊಡುತ್ತಿದೆ. ಮುಂದಿನ ದಿನಗಳಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಅಚವೆ ಗ್ರಾಮ ಪಂಚಾಯತ ಉಪಾಧ್ಯಕ್ಷ ಬಾಲಚಂದ್ರ ಶೆಟ್ಟಿ ಮಾತನಾಡಿದರು. ಪ್ರಮುಖರಾದ ಸುಧಾಕರ ಜಾಂಬಾವಳಿಕರ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ತಿಮ್ಮಪ್ಪ ಗೌಡ, ಸಂತೋಷ ನಾಯ್ಕ, ರಮಾನಂದ ನಾಯ್ಕ ಅಚವೆ, ಉದಯ ನಾಯ್ಕ ಹೊಸಗದ್ದೆ, ನಾಗರಾಜ ಹೆಗಡೆ, ಉದಯ ನಾಯ್ಕ ಬೇಲೆಕೇರಿ, ಎಚ್.ಬಿ. ನಾಯಕ, ರಾಜು ವಿ. ಗೌಡ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ತಾಲೂಕು ಅಧ್ಯಕ್ಷ ಗೌರೀಶ ನಾಯಕ ಸ್ವಾಗತಿಸಿದರು. ಸಭೆಗೆ ಆಗಮಿಸಿದ ಹಲವರು ಮುಂದಿನ ಹೋರಾಟದ ಬಗ್ಗೆ ಚರ್ಚಿಸಿದರು.