ಯಲ್ಲಾಪುರ: ಜನರು ಬುದ್ಧಿವಂತರಾಗಿದ್ದಾರೆ. ಅಭಿವೃದ್ಧಿ ಹಾಗೂ ನೆಮ್ಮದಿಯ ಬದುಕನ್ನು ಬಯಸುತ್ತಿದ್ದಾರೆ. ಶಿವರಾಮ ಹೆಬ್ಬಾರ್ ಶಾಸಕರು, ಸಚಿವರಾದ ನಂತರ. ಈ ಕ್ಷೇತ್ರದಲ್ಲಿ ಜನರು ನೆಮ್ಮದಿಯ ಜೀವನ ಸಾಗಿಸುತ್ತಿದ್ದು, ಯಾವುದೇ ಕಾರಣಕ್ಕೂ ಹೆಬ್ಬಾರ್ ವಿರುದ್ಧ ಮತ ಚಲಾಯಿಸಲಾರರು ಎನ್ನುವ ವಿಶ್ವಾಸವಿದೆ. ಕೆಲವರು ಅಪಪ್ರಚಾರದ ಮೂಲಕ ಮತದಾರರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಪ್ರಜ್ಞಾವಂತ ಮತದಾರರು ಇಂಥ ಹೇಳಿಕೆಯನ್ನು ನಂಬಲಾರರು ಎಂದು ಯಲ್ಲಾಪುರ ಬಿಜೆಪಿ ಮಂಡಲ ಉಪಾಧ್ಯಕ್ಷ ಹಾಗೂ ಪಟ್ಟಣ ಪಂಚಾಯತ ಮಾಜಿ ಅಧ್ಯಕ್ಷ ಶಿರೀಶ ಪ್ರಭು ಹೇಳಿದರು.
ಚುನಾವಣೆ ಸಮೀಪಿಸುತ್ತಿದ್ದಂತೆ, ಮಳೆಗಾಲದಲ್ಲಿ ಹುಟ್ಟುವ ವಿಷಕಾರಿ ಅಣಬೆಗಳಂತೆ ಕೆಲವರು ಹುಟ್ಟಿಕೊಳ್ಳುತ್ತಾರೆ. ಇವರಿಂದ ಪಕ್ಷಕ್ಕಾಗಲಿ ಅಥವಾ ಪಕ್ಷದ ನಾಯಕರಿಗಾಗಿ, ಏನು ಕೆಲಸ ಮಾಡಲು ಸಾಧ್ಯವಾಗದಿದ್ದರೂ ಕೂಡ ವ್ಯಾಪಕವಾಗಿ ಅಪಪ್ರಚಾರವನ್ನು ಮಾತ್ರ ಮಾಡುತ್ತಾರೆ. ಈ ಕ್ಷೇತ್ರ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವುದು ಹಾಗೂ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಯಲ್ಲಾಪುರ ತಾಲೂಕು ಮುಂಡಗೋಡು ಹಾಗೂ ಬನವಾಸಿ ಭಾಗಗಳು ಹಿಂದೆಂದೂ ಕಾಣದ ವೇಗದಲ್ಲಿ ಬೆಳವಣಿಗೆ ಕಾಡುತ್ತಿರುವುದು ಕೆಲವರಿಗೆ ಕಣ್ಣಲ್ಲಿ ಮಣ್ಣು ಸೇರಿ ಕಣ್ಣು ಕೆಂಪಾಗಿಸಿದೆ, ಎಲ್ಲಿಯೋ ಮುಳ್ಳು ಚುಚ್ಚಿದಂತಹ ಅನುಭವ ಆಗುತ್ತಿದೆ. ಹೀಗಾಗಿ ತಳ ಸುಟ್ಟ ಬೆಕ್ಕಿನಂತೆ ಆಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಅನೇಕ ಜನ ಬೇರೆ ಪಕ್ಷದ ಕಾರ್ಯಕರ್ತರು ಕ್ಷೇತ್ರದಲ್ಲಿ ಶಿವರಾಮ ಹೆಬ್ಬಾರ್ ಕೈಗೊಂಡಿರುವ ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿಕೊಂಡಿದ್ದಾರೆ. ಬಹಳಷ್ಟು ವರ್ಷದ ಹಿಂದೆ ಇಂತಹ ಅಭಿವೃದ್ಧಿ ಕಾರ್ಯಗಳು ನಡೆದಿದ್ದರೆ, ಕ್ಷೇತ್ರದ ರೈತರು ಗ್ರಾಮೀಣ ವಾಸಿಗಳು ನಗರವಾಸಿಗಳು, ನಿರುದ್ಯೋಗಿ ಯುವಕ ಯುವತಿಯರು ಇಂದು ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಪಡೆಯುತ್ತಿದ್ದರು. ಬೇರೆ ಜಿಲ್ಲೆಗಳಂತೆ ಅಭಿವೃದ್ಧಿ ಪಡಿಸುವ ಎಲ್ಲಾ ಅವಕಾಶಗಳು ಇದ್ದಾಗಲೂ ಕೂಡ ಹಿಂದಿನ ಜನಪ್ರತಿನಿಧಿಗಳು ಅವೆಲ್ಲ ಗಾಳಿಗೆ ತೂರಿದ್ದರು. ಇಂದು ಮತ್ತೆ ಮತದಾರರ ಎದುರು ಮುಖ ತೋರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಪ್ರಾಜ್ಞ ಮತದಾರರು ಈ ಮುಖಗಳನ್ನು ತಿರಸ್ಕರಿಸಲಿದ್ದಾರೆ. ಬರುವ ಚುನಾವಣೆಯಲ್ಲಿ ಮುಖದ ಹಿಂದಿರುವ ಮುಖವಾಡಗಳಿಗೆ ಮಂಗಳಾರತಿ ಮಾಡಲಿದ್ದಾರೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.
ಶಿವರಾಮ ಹೆಬ್ಬಾರ್ ಅವರಿಗೆ ಬಿಜೆಪಿಯಿಂದ ಟಿಕೇಟ್ ನಿಶ್ಚಿತವಾಗಿದ್ದು, ಭಾರತೀಯ ಜನತಾ ಪಕ್ಷದ ನಿಷ್ಠಾವಂತ ಕಾರ್ಯಕರ್ತರು, ಪಕ್ಷ ನಿಷ್ಠ ನಾಯಕರು ಮತ್ತು ಶಿವರಾಮ ಹೆಬ್ಬಾರ್ ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿರುವ ಎಲ್ಲ ಮತದಾರರು ಮತ ನೀಡುವ ಮತ್ತು ಕೊಡಿಸುವ ಮೂಲಕ ಮುಂದಿನ ಚುನಾವಣೆಯಲ್ಲಿ ಅವರನ್ನು ಪ್ರತಿಪಕ್ಷಗಳ ಅಭ್ಯರ್ಥಿಗಿಂತ ಅತ್ಯಂತ ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಿ ಕೊಡಲಿದ್ದಾರೆ ಎಂದು ಶಿರೀಶ ಪ್ರಭು ಅಭಿಪ್ರಾಯಪಟ್ಟ ಅವರು, ಹೆಬ್ಬಾರ್ ಅಂತರದ ಗೆಲವು ಹಿಂದೆಂದಿಗಿಂತಲೂ ಹೆಚ್ಚಾಗಿಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.