ಯಲ್ಲಾಪುರ; ತಾಲೂಕಿನ ಕುಂದರಗಿ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವ ಸಮಾರಂಭವು ಫೆ.10,11,12ರಂದು ನಡೆಯಲಿದೆ ಎಂದು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸತ್ಯನಾರಾಯಣ ಹೆಗಡೆ ಹೇಳಿದರು.
ಅಮೃತಮಹೋತ್ಸವದ ಕುರಿತು ಶುಕ್ರವಾರ ಯಲ್ಲಾಪುರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಈ ಶಾಲೆಯು 1947ರಲ್ಲಿ ಪ್ರಾರಂಭವಾಗಿದ್ದು, ದಿ.ಎನ್.ಎಸ್.ಹೆಗಡೆ ಕುಂದರಗಿ ಹಾಗೂ ಊರಿನ ಅನೇಕ ಹಿರಿಯರ ಸಹಕಾರ ಹಾಗೂ ಪ್ರಯತ್ನದಿಂದ ಈ ಶಾಲೆಯು ಅಭಿವೃದ್ಧಿ ಹಾಗೂ ಶೈಕ್ಷಣಿಕ ಪ್ರಗತಿಯನ್ನು ಕಂಡಿದೆ.
ಅಮೃತ ಮಹೋತ್ಸವದ ಸಂದರ್ಭದಲ್ಲಿ ವಿದ್ಯಾಮೃತ ಶಾಲಾ ಶೈಕ್ಷಣಿಕ ಹಬ್ಬ, ಸ್ನೇಹ ಸಮ್ಮಿಲನ, ಗೌರವ ಸಂಮಾನ, ಯಕ್ಷಗಾನ ಮುಂತಾದ ನಾನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ಫೆ.9ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.
ಫೆ.10ರಂದು ಕಾರ್ಯಕ್ರಮನ್ನು ವಿ.ಪ.ಸದಸ್ಯ ಶಾಂತಾರಾಮ ಸಿದ್ದಿ ಉದ್ಘಾಟಿಸಲಿದ್ದು, ರಾ.ವಿ.ಯೋ.ಸಮಿತಿಯ ಉಪಾಧ್ಯಕ್ಷ ಪ್ರಮೋದ ಹೆಗಡೆ ಆಶಯ ನುಡಿಗಳನ್ನು ಆಡಲಿದ್ದಾರೆ. ಸತ್ಯನಾರಾಯಣ ಹೆಗಡೆ ಅಧ್ಯಕ್ಷತೆ ವಹಿಸಲಿದ್ದು, ವಿವಿಧ ಕ್ಷೇತ್ರಗಳ ಗಣ್ಯರು ಆಗಮಿಸಲಿದ್ದಾರೆ.
ಬಹುಮಾನ ವಿತರಣೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಜೆ ಮಿಮಿಕ್ರಿ ಹಾಗೂ ಗೊಂಬೆಯಾಟ ನಡೆಯಲಿದೆ. ಹಾಗೆಯೇ ರಾತ್ರಿ ‘ಚಂದ್ರಾವಳಿ’ ಹಾಗೂ ‘ಕನಕಾಂಗಿ ಕಲ್ಯಾಣ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಫೆ.11ರಂದು ಶಾಲೆಯ ಹಳೆ ವಿದ್ಯಾರ್ಥಿಗಳು ಹಾಗೂ ಮಹಿಳೆಯರಿಗಾಗಿ ವಿವಿಧ ಸ್ಪರ್ಧಾ ಕಾರ್ಯಕ್ರಮ ನಡೆಯಲಿದೆ. ಫೆ. 12 ರಂದು ಸಾಧಕರಿಗೆ ಸಂಮಾನ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಲಿದ್ದು, ಸಚಿವ ಶಿವರಾಮ ಹೆಬ್ಬಾರ್ ಕಾರ್ಯಕ್ರಮ ಉದ್ಘಾಟಿಸುವರು. ಕುಂದಣ ಹಸ್ತಪತ್ರಿಕೆಯನ್ನು ವಿ.ಪ.ಸದಸ್ಯ ಎಸ್.ವಿ.ಸಂಕನೂರು ಬಿಡುಗಡೆಗೊಳಿಸಲಿದ್ದು, ದೀಪಾ ಸಿದ್ದಿ ಅಧ್ಯಕ್ಷತೆ ವಹಿಸುತ್ತಾರೆ. ಸಂಜೆ 5.30ಕ್ಕೆ ಸಂದೀಪ ಭಟ್’ರಿಂದ ದಿಕ್ಸೂಚಿ ಭಾಷಣ,ಸಂಜೆ ಮನರಂಜನಾ ಕಾರ್ಯಕ್ರಮ ಹಾಗೂ ಗೀತಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭಲ್ಲಿ ತಾ.ಪಂ.ಮಾಜಿ ಸದಸ್ಯ ನಟರಾಜ ಗೌಡರ್, ಶಾಲಾ ಮುಖ್ಯಾಧ್ಯಾಪಕ ನಾಗಪ್ಪ ಜಿ.ಎಚ್, ಗ್ರಾ.ಪಂ.ಸದಸ್ಯ ರಾಮಕೃಷ್ಣ ಹೆಗಡೆ, ಸಮಿತಿಯ ರಾಘು ಕುಂದರಗಿ, ಮುಕ್ತಾರ ಪಠಾಣ ಇದ್ದರು.