ಹೊನ್ನಾವರ: ಪಿಎಲ್‌ಡಿ ಬ್ಯಾಂಕ್ ಪ್ರತಿ ವರ್ಷ ಬರುವ ಲಾಭಾಂಶದಲ್ಲಿ ಒಂದಿಷ್ಟು ಭಾಗವನ್ನು ಜನೋಪಯೋಗಿ ಕಾರ್ಯಕ್ಕೆ ಬಳಸಲಾಗುತ್ತಿದೆ. ಅದರಂತೆ ಈ ಸಲ ತಾಲೂಕಾಸ್ಪತ್ರೆಗೆ ತೀರ ಅಗತ್ಯವಾದ ಡಯಾಲಿಸಿಸ್ ಮಷಿನ್‌ನ್ನು ನೀಡಿದ್ದೇವೆ. ಇದರಿಂದ ಕಿಡ್ನಿ ತೊಂದರೆಯಿoದ ಬಳಲುತ್ತಿರುವವರಿಗೆ ತುಂಬಾ ಅನೂಕೂಲವಾಗಲಿದೆ ಎಂದು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ವಿ.ಎನ್.ಭಟ್ ಅಳ್ಳಂಕಿ ಹೇಳಿದರು.
ಅವರು ತಾಲೂಕ ಆಸ್ಪತ್ರೆಯಲ್ಲಿ ಪಿಎಲ್‌ಡಿ ಬ್ಯಾಂಕ್ ನೀಡಿದ ಹೊಸ ಡಯಾಲಿಸಿಸ್ ಮಷಿನ್‌ನ್ನು ಉದ್ಘಾಟಿಸಿ, ಮುಂದಿನ ದಿನದಲ್ಲಿ ಬ್ಯಾಂಕ್ ವತಿಯಿಂದ ನೆರವು ನೀಡಲಾಗುತ್ತದೆ ಎಂದು ಮಾತನಾಡಿದರು.
ಬ್ಯಾಂಕ್ ನಿರ್ದೇಶಕ ಯೋಗೇಶ ರಾಯ್ಕರ ಮಾತನಾಡಿ, ಬ್ಯಾಂಕ್ ತನ್ನ ಇತಿಮಿತಿಯಲ್ಲಿ ತಾಲೂಕಾ ಆಸ್ಪತ್ರೆಗೆ ಸಹಾಯಹಸ್ತವನ್ನು ಚಾಚಿದೆ. ಇದರ ಪ್ರಯೋಜನ ಬಡ ರೋಗಿಗಳಿಗೆ ಸಿಗಲಿದೆ ಎಂದು ಹೇಳಿದರು.
ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ರಾಜೇಶ ಕಿಣಿ, ಸ್ತ್ರೀರೋಗ ತಜ್ಞ ಡಾ.ಕೃಷ್ಣಾಜಿ ಬ್ಯಾಂಕ್ ಕಾರ್ಯಕ್ಕೆ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಬ್ಯಾಂಕ್ ನಿರ್ದೇಶಕ ವಿ.ಕೆ.ವಿಶಾಲ್, ರಾಜೇಂದ್ರ ನಾಯ್ಕ, ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಪಿ.ಎನ್.ಭಟ್, ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ಶಶಿಕಲಾ ನಾಯ್ಕ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಆಪ್ತಸಮಾಲೋಚಕರಾದ ವಿನಾಯಕ ಪಟಗಾರ ಕಾರ್ಯಕ್ರಮ ನಿರ್ವಹಿಸಿದರು. ಆಸ್ಪತ್ರೆಯ ಮತ್ತು ಬ್ಯಾಂಕ್ ಸಿಬ್ಬಂದಿ ವರ್ಗ ಕಾರ್ಯಕ್ರಮದಲ್ಲಿ ಹಾಜರಿದ್ದರು.