ಕಾರವಾರ: ವಿರೋಧ, ಪ್ರತಿಭಟನೆಗಳ ನಡುವೆಯೂ ಬೈತಖೋಲ್ ಜನವಸತಿ ಪ್ರದೇಶದ ಬಳಿ ನೌಕಾನೆಲೆಯಿಂದ ರಸ್ತೆ ಕಾಮಗಾರಿ ಮುಂದುವರಿಸಲಾಗುತ್ತಿದೆ. ಆದರೆ ಇದರಿಂದ ಜನರ ಪ್ರಾಣಕ್ಕೆ ಕುತ್ತು ಬರುವ ಸಾಧ್ಯತೆ ಇದ್ದು, ಕಾಮಗಾರಿ ಸ್ಥಗಿತಗೊಳಿಸದೆ ಇದ್ದಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಬೈತಖೋಲ್ ಅಲಿಗದ್ದಾ ನಿರಾಶ್ರಿತರ ಸಂಘದ ಅಧ್ಯಕ್ಷ ಪ್ರೀತಮ್ ಮಾಸೂರಕರ್ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೈತಖೋಲ್ ಸ್ಥಳೀಯ ನಿವಾಸಿಗಳ ವಿರೋಧ ಹಾಗೂ ಪ್ರತಿಭಟನೆ ನಡುವೆಯೂ ಭೂದೇವಿ ಗುಡ್ಡದ ಮೇಲೆ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಸಲಾಗುತ್ತಿದೆ. ಆದರೆ ಕಾರವಾರ ಸೂಕ್ಷ್ಮ ಪ್ರದೇಶವಾಗಿದ್ದು, ಮಳೆಗಾಲದಲ್ಲಿ ಕುಸಿಯುವ ಭೀತಿ ಇದೆ. ಈಗಾಗಲೇ ಕಾರವಾರದಲ್ಲಿ ಹಲವು ಕಡೆ ಸಾಕಷ್ಟು ಪ್ರಮಾಣದಲ್ಲಿ ಗುಡ್ಡ ಕುಸಿದು ಪ್ರಾಣಹಾನಿಯೂ ಸಂಭವಿಸಿದೆ. ಇಷ್ಟಾದರೂ ಕಾಮಗಾರಿ ತಡೆಯಲು ನಿರ್ಲಕ್ಷಿಸಲಾಗುತ್ತಿದೆ ಎಂದರು.
ಈಗಗಲೇ ಈ ಬಗ್ಗೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದರು ಕೂಡ ನೌಕಾನೆಲೆ ಕಾಮಗಾರಿ ತಡೆಯಲು ಆಗುವುದಿಲ್ಲ ಎಂದು ಹೇಳುತ್ತಾರೆ. ಜನಸಾಮಾನ್ಯರ ಪ್ರಾಣಕ್ಕೆ ಅಪಯಕಾರಿಯಾಗಿರುವ ಕಾಮಗಾರಿ ತಡೆಯಲು ಜಿಲ್ಲಾಡಳಿತ ಮಿನಾಮೇಷ ಎಣಿಸುತ್ತಿದೆ. ಜ.26ರಂದು ನೌಕಾನೆಲೆ ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರೊಂದಿಗೆ ಸಭೆ ನಡೆಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ಭರವಸೆ ನೀಡಿದ್ದು, ಅಂದು ಕಾಮಗಾರಿ ಸ್ಥಗಿತಗೊಳಿಸಲು ತಿರ್ಮಾನಿಸದೇ ಇದ್ದಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಈ ವೇಳೆ ಸ್ಥಳೀಯರಾದ ವಿಲ್ಸನ್ ಫರ್ನಾಂಡಿಸ್, ರಾಜೇಶ್ ಮಾಜಾಳಿಕರ್, ಸ್ನೇಹಲ್ ಹರಿಕಂತ್ರ, ಛಾಯಾ ಜಾವಕರ್ ಸೇರಿದಂತೆ ಇನ್ನಿತರರು ಇದ್ದರು.