ಕುಮಟಾ: ಅಮ್ಮನ ಪ್ರೀತಿ ಅಮೃತ. ಅಪ್ಪನ ಪ್ರೀತಿ ಅದ್ಭುತ. ನಾವೆಲ್ಲರೂ ಭಾರತೀಯ ಸಂಸ್ಕೃತಿ ಮೈಗೂಡಿಸಿಕೊಂಡು ಅಮ್ಮ ಮತ್ತು ಅಪ್ಪನನ್ನು ದೇವರಂತೆ ಕಾಣಬೇಕು ಎಂದು ಶ್ರೀಪತಂಜಲಿ ಯೋಗ ಶಿಕ್ಷಣ ಕೇಂದ್ರ ಸಮಿತಿಯ ಪ್ರಾಂತ ಸಂಚಾಲಕ ಮತ್ತು ಸಂಘಟನಾ ಪ್ರಮುಖ ಹರೀಶ ಹೇಳಿದರು.
ಪಟ್ಟಣದ ನಾದಶ್ರೀ ಕಲಾ ಕೇಂದ್ರದಲ್ಲಿ ಮಂಗಳೂರು ನೇತ್ರಾವತಿ ವಲಯದ ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿಯ ತಾಲೂಕು ಶಾಖೆಯಲ್ಲಿ ಆಯೋಜಿಸಿದ್ದ ಮಾತೃವಂದನಾ ಹಾಗೂ ಮಾತೃಭೋಜನಾ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಭಾರತವನ್ನು ನಾವು ತಾಯಿಯ ಸ್ಥಾನದಲ್ಲಿ ಕಾಣುತ್ತೇವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ತಾಯಿಯನ್ನು ಕೆಟ್ಟ ದೃಷ್ಟಿಯಿಂದ ಕೆಲವರು ನೋಡುತ್ತಿದ್ದಾರೆ. ಇದು ನಮ್ಮ ಸಂಸ್ಕೃತಿಯ ಲಕ್ಷಣವಲ್ಲ. ಅಮ್ಮ ಮತ್ತು ಆಕೆಯ ಪ್ರೀತಿಯನ್ನು ವರ್ಣಿಸಲು ಮತ್ತು ವಿವರಿಸಲು ಯಾರಿಂದಲೂ ಸಾಧ್ಯವಿಲ್ಲ. ಪಾಶ್ಚಿಮಾತ್ಯ ಶಿಕ್ಷಣದಿಂದ ಮನುಷ್ಯನಿಗೆ ಅಮ್ಮನ ಮೇಲಿನ ವ್ಯಾಮೋಹಕ್ಕಿಂತ ವಸ್ತುಗಳ ಮೇಲಿನ ವ್ಯಾಮೋಹ ಅಧಿಕವಾಗುತ್ತಿರುವುದು ವಿಷಾದನೀಯ ಸಂಗತಿ. ಅತಿಯಾದ ಸಾಮಾಜಿಕ ಜಾಲತಾಣಗಳ ಬಳಕೆಯಿಂದ ನಮ್ಮ ಸಂಸ್ಕೃತಿ, ಆಚಾರ-ವಿಚಾರಗಳಿಂದ ವಿಮುಖರಾಗುತ್ತಿದ್ದೇವೆ. ಇದು ಸರಿಯಾದ ಕ್ರಮವಲ್ಲ. ಮಹಾನ್ ಪುರುಷರ ಜೀವನ ಚರಿತ್ರೆಗಳನ್ನು ಅಧ್ಯಯ ಮಾಡಿಕೊಂಡು ಅವರ ತತ್ವ-ಸಿದ್ಧಾಂತಗಳನ್ನು ರೂಢಿಸಿಕೊಳ್ಳಲು ಪ್ರಯತ್ನಿಸಬೇಕು ಎಂದ ಅವರು, ದೇವಸ್ಥಾನಗಳಲ್ಲಿ ಇಂತಹ ಬಟ್ಟೆ ಧರಿಸಬೇಕು ಎಂದು ನಾಮಫಲಕ ಹಾಕಲು ಪ್ರಾರಂಭಿಸಿದ್ದಾರೆ ಎಂದರೆ ನಮ್ಮ ಸಂಸ್ಕೃತಿ ಎಲ್ಲಿಗೆ ಬಂತು ಎಂಬುದರ ಕುರಿತು ನಾವೆಲ್ಲರೂ ಆಲೋಚಿಸಬೇಕು. ಸಂಸ್ಕಾರ ಇಲ್ಲದ ಶಿಕ್ಷಣ ಸಮಾಜಕ್ಕೆ ಮಾರಕ ಎಂದು ಹೇಳಿದರು.
ವೃದ್ಧಾಶ್ರಮದಲ್ಲಿರುವ ತಂದೆ- ತಾಯಂದಿರ ಮಕ್ಕಳು ದೊಡ್ಡ ದೊಡ್ಡ ಹುದ್ದೆಯಲ್ಲಿದ್ದಾರೆ. ಅವರಿಗೆ ಜನ್ಮ ನೀಡಿದ ತಾಯಿ-ತಂದೆ ನೋಡಿಕೊಳ್ಳಲಾಗದಂತಹ ದುಸ್ಥಿತಿ ಬಂದಿದೆ. 9 ತಿಂಗಳು ಹೊತ್ತು- ಹೆತ್ತು ಜನ್ಮ ನೀಡಿದ ತಾಯಿಯನ್ನು ಪೂಜನೀಯ ಸ್ಥಾನದಲ್ಲಿ ನೋಡಿಕೊಳ್ಳಬೇಕು ಎಂದು ಕರೆ ನೀಡಿದರು.
ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಜಾಹ್ನವಿ ಹೆಗಡೆ ಮಾತನಾಡಿ, ಶಿಕ್ಷಣವನ್ನು ಧನಾರ್ಜನೆಗೆ ಬಳಸಿಕೊಳ್ಳದೇ ಜ್ಞಾನಾರ್ಜನೆಗೆ ಬಳಸಿಕೊಳ್ಳಬೇಕು. ಅತಿಯಾದ ಒತ್ತಡದ ಜೀವನದಿಂದ ನಮ್ಮ ತನದಿಂದ ವಿಮುಖರಾಗುತ್ತಿದ್ದೇವೆ. ಯೋಗ ಸೇರಿದಂತೆ ಇನ್ನಿತರ ಕ್ರಿಯಾಶೀಲ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಸಂಸ್ಕಾರ ರೂಢಿಸಿಕೊಳ್ಳಲು ಸಾಧ್ಯ ಎಂದ ಅವರು, ತಾಯಿ ಪ್ರತಿ ಮಕ್ಕಳ ಹಿತ ಚಿಂತನೆಯಲ್ಲಿ ಇರುತ್ತಾಳೆ. ಇಂದಿನ ಯುವ ಜತೆ ಉತ್ತಮ ಆಚಾರ-ವಿಚಾರಗಳನ್ನು ಮೈಗೂಡಿಸಿಕೊಂಡು ಭಾರತದ ಪರಂಪರೆಯನ್ನು ಮುಂದಿನ ಪಿಳೀಗೆಗೆ ಹಸ್ತಾಂತರಿಸಬೇಕು ಎಂದರು.
ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿಯ ತಾಲೂಕು ಶಾಖೆಯ ಯೋಗ ಶಿಕ್ಷಣದ ಮುಖ್ಯ ಶಿಕ್ಷಕಿ ಗೀತಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯು ರಾಜ್ಯದ ವಿವಿಧ ತಾಲೂಕುಗಳಲ್ಲಿ 750 ಶಾಖೆಯನ್ನು ಹೊಂದಿದ್ದು, ನೂರಾರು ಯೋಗ ಬಂಧುಗಳು ಯೋಗದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದೆ. ಯೋಗದ ಮೂಲಕ ಸಂಸ್ಕಾರವoತ ಸಮಾಜ ನಿರ್ಮಾಣ ಮಾಡುವುದು ನಮ್ಮ ಮುಖ್ಯ ಗುರಿಯಾಗಿದ್ದು, ಅಮ್ಮ ಎಲ್ಲ ಮೌಲ್ಯಗಳ ಸಾಕಾರ ಮೂರ್ತಿಯಾಗಿದ್ದಾಳೆ ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಚೇತನ ಶೇಟ್ ಉಪಸ್ಥಿತರಿದ್ದರು. ಸೀಮಾ ಪ್ರಾರ್ಥಿಸಿದರು. ಕೆ.ಎನ್.ಪೂರ್ಣಿಮಾ ಅಬ್ಬೇಮನೆ ನಿರೂಪಿಸಿದರು. ಸುಜಾತಾ ಸ್ವಾಗತಿಸಿದರು. ನೇತ್ರಾವತಿ ವಲಯದ ಜಿಲ್ಲಾ ಮಾರ್ಗದರ್ಶಕಿ ಗೀತಾ ವಂದಿಸಿದರು. ಯೋಗ ಬಂಧುಗಳು ಯೋಗ ತರಗತಿಯ ಅನುಭವ ಹಂಚಿಕೊoಡರು. ಸಭಾ ಕಾರ್ಯಕ್ರಮದ ನಂತರ ಹಿರಿಯರು ಕಿರಿಯರಿಗೆ ಆಶೀರ್ವದಿಸಿದರು. ತಾಯಿ ಕೈ ತುತ್ತಿನ ಮಹತ್ವ ತಿಳಿಸುವ ದೃಷ್ಟಿಯಿಂದ ಎಲ್ಲರಿಗೂ ಕೈ ತುತ್ತು ನೀಡುವ ಮೂಲಕ ಮಾತೃಭೋಜನ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು.