ಬೆಂಗಳೂರು: ರಾಜ್ಯದ 25 ತಾಲೂಕುಗಳಲ್ಲಿ ಮಿನಿ ಜವಳಿ ಪಾರ್ಕ್‌ಗಳನ್ನು ಸ್ಥಾಪನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ನೇಕಾರರು ಹೆಚ್ಚಿನ ಸಂಖ್ಯೆಯಲ್ಲಿರುವ ತಾಲೂಕುಗಳನ್ನು ಆಯ್ಕೆ ಮಾಡಿ ಮಿನಿ ಜವಳಿ ಪಾರ್ಕ್ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದ್ದಾರೆ.
ಬುಧವಾರ ಗೃಹಕಚೇರಿ ಕೃಷ್ಣಾದಲ್ಲಿ ವಿದ್ಯುತ್ ಮಗ್ಗ ನೇಕಾರರು ಮತ್ತು ಕಾರ್ಮಿಕರಿಗೆ ಡಿಬಿಟಿ ಮೂಲಕ ನೇಕಾರರ ಸಮ್ಮಾನ್ ಯೋಜನೆಯ ಸಹಾಯಧನ ವರ್ಗಾವಣೆಗೆ ಚಾಲನೆ ನೀಡಿದ ಬಳಿಕ ಅವರು ಈ ಘೋಷಣೆ ಮಾಡಿದ್ದಾರೆ.
ಜವಳಿ ಪಾರ್ಕ್‌ಗಳು ಹತ್ತಿಯ ಸಂಸ್ಕರಣೆಯಿಂದ ವಸ್ತ್ರ ತಯಾರಿಕೆ, ಸಿದ್ಧ ಉಡುಪು ತಯಾರಿಕೆವರೆಗಿನ ಎಲ್ಲಾ ಹಂತಗಳ ಸೌಲಭ್ಯಗಳನ್ನು ಒಳಗೊಂಡಿರುತ್ತದೆ. ಇದರಿಂದ ನೇಕಾರರಿಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದ್ದಾರೆ.
ಅಲ್ಲದೇ ಅಮೆಜಾನ್, ಫ್ಲಿಪ್‌ಕಾರ್ಟ್ ಸೇರಿದಂತೆ ಮತ್ತಿತರ ಆನ್‌ಲೈನ್ ವ್ಯಾಪಾರಿ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದ ಅವರು, ನೇಕಾರರು ತಮ್ಮ ಉತ್ಪನ್ನಗಳ ಗುಣಮಟ್ಟವೃದ್ಧಿಸುವ ಮೂಲಕ ರಫ್ತು ಮಾಡಲು ಸಹ ಮುಂದಾಗಬೇಕು. ಡಿಜಿಟಲ್ ವೇದಿಕೆಯ ಮೂಲಕ ಮಾರುಕಟ್ಟೆವಿಸ್ತರಣೆ ಮಾಡಬೇಕು. ಇದಕ್ಕೆ ಕೈಮಗ್ಗ ಮತ್ತು ಜವಳಿ ಇಲಾಖೆ ಸಹಕಾರ ನೀಡಲಿದೆ ಎಂದರು.