Slide
Slide
Slide
previous arrow
next arrow

ಬಾಹ್ಯ- ಆಂತರಿಕ ಶಕ್ತಿ ಹೆಚ್ಚಿಕೊಳ್ಳಲು ಶಿಕ್ಷಣ ಸಹಕಾರಿ: ಡಾ.ಸುರೇಶ

300x250 AD

ಸಿದ್ದಾಪುರ: ಶಿಕ್ಷಣಕ್ಕೆ ಬಹುದೊಡ್ಡ ಶಕ್ತಿಯಿದೆ. ಬಾಹ್ಯ ಮತ್ತು ಆಂತರಿಕ ಸೌಂದರ್ಯ, ಶಕ್ತಿಗಳನ್ನು ಹೆಚ್ಚಿಕೊಳ್ಳಲು ಶಿಕ್ಷಣ ಸಹಕಾರಿಯಾಗುತ್ತದೆ ಎಂದು ಎಂಜಿಸಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ಸುರೇಶ ಎಸ್.ಗುತ್ತೀಕರ ಹೇಳಿದರು.
ಅವರು ಎಂಜಿಸಿ ಪದವಿಪೂರ್ವ ಮಹಾವಿದ್ಯಾಲಯ ಹಾಗೂ ವಿದ್ಯಾರ್ಥಿ ಸಂಸತ್ ಸಹಯೋಗದಲ್ಲಿ ಆಯೋಜಿಸಿದ 2022-23ನೇ ಸಾಲಿನ ವಾರ್ಷಿಕ ಬಹುಮಾನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಹಸಿವಿನ ಜೊತೆ ಕಲಿತ ಪಾಠ ಯಾವಾಗಲೂ ಜ್ಞಾಪಕದಲ್ಲಿರುತ್ತದೆ. ಆಳವಾದ ಅಧ್ಯಯನ, ಗ್ರಹಿಕೆಗಳಿಂದ ಶಿಕ್ಷಣವನ್ನು ಪಡೆದುಕೊಂಡಾಗ ಅದು ಬದುಕಿನುದ್ದಕ್ಕೂ ಇರುತ್ತದೆ ಎಂದರು.
ಕಿರುತೆರೆ, ಚಲನಚಿತ್ರ ಹಾಗೂ ಭರತನಾಟ್ಯ ಕಲಾವಿದೆ ಭಾರತಿ ಹೆಗಡೆ ಮಾತನಾಡಿ, ಶಿಕ್ಷಕರು ಧನಾತ್ಮಕ ಅಂಶಗಳಿಗೆ ಪ್ರೋತ್ಸಾಹಿಸಿ ಉತ್ತಮ ನಾಗರಿಕರಾಗುವಲ್ಲಿ ನಮ್ಮನ್ನು ರೂಪಿಸುತ್ತಾರೆ. ಯುವ ಜನಾಂಗ ನಮ್ಮ ತಳಪಾಯವನ್ನು ಮರೆಯಬಾರದು. ಉಳಿದವರಿಗೆ ಒಳ್ಳೆಯದನ್ನು ಮಾಡುವ ರೀತಿಯಲ್ಲಿ, ಪಾಲಕರಿಗೆ ಹೆಮ್ಮೆ ತರುವ ನಿಟ್ಟನಲ್ಲಿ ಸಮಾಜಮುಖಿಯಾಗಿ ಬೆಳೆಯಬೇಕು. ಈ ದಿನಗಳಲ್ಲಿ ಕನಸು, ಧ್ಯೇಯೋದ್ದೇಶಗಳು ಸಂಕುಚಿತಗೊಳ್ಳುತ್ತಿದ್ದು, ದೊಡ್ಡ ಕನಸು, ದೊಡ್ಡ ವಿಚಾರಗಳು ಸಾಕಾರಗೊಳ್ಳಲು ಶ್ರಮವಹಿಸಬೇಕು ಎಂದರು.
ಪತ್ರಕರ್ತ, ಬರಹಗಾರ ಗಂಗಾಧರ ಕೊಳಗಿ, ಕೃಷಿ ಸಂಸ್ಕೃತಿ ನಮಗೆ ಸಹನೆ, ಶ್ರಮ, ಭರವಸೆ ಮುಂತಾದ ಮೌಲಿಕ ಗುಣಗಳನ್ನು ಕಲಿಸುತ್ತದೆ. ಕೃಷಿಸಂಸ್ಕೃತಿ ಮೂಲದಿಂದ ಬಂದ ನಾವು ಅವುಗಳ ಜೊತೆಗೆ ಶಿಕ್ಷಣ ನೀಡುವ ಜ್ಞಾನ, ಅರಿವುಗಳನ್ನು ಗ್ರಹಿಕೆಯ ಮೂಲಕ ವಿಸ್ತಿರಿಸಿಕೊಂಡಾಗ ಬದುಕಿನ ಸವಾಲುಗಳನ್ನು ಎದುರಿಸಲು ಸಾಧ್ಯ. ತಂದೆ, ತಾಯಿಗಳ ಜೊತೆ ವಿನಯದ ನಡವಳಿಕೆ, ಗುರುಗಳಿಗೆ ಗೌರವ, ಸಮಾಜದ ಇನ್ನಿತರರ ಜೊತೆ ಸ್ನೇಹಶೀಲತೆ ಇವೆಲ್ಲ ನಮ್ಮನ್ನು ಬೆಳೆಸುತ್ತದೆ ಎಂದರು.
ಶಿಕ್ಷಣ ಪ್ರಸಾರಕ ಸಮಿತಿ ಗೌರವ ಕಾರ್ಯದರ್ಶಿ ಕೆ.ಐ.ಹೆಗಡೆ ಮಾತನಾಡಿ, ಶಿಕ್ಷಣ ಪಡೆಯಲು ಯಾವ ಸೌಕರ್ಯಗಳಿಲ್ಲದ ಕಷ್ಟದ ಸಂದರ್ಭದಲ್ಲಿ ಈ ತಾಲೂಕಿನಲ್ಲಿ ಶೈಕ್ಷಣಿಕ ಕ್ರಾಂತಿಯನ್ನು ಮಾಡಿದವರು ಗಣೇಶ ಹೆಗಡೆ ದೊಡ್ಮನೆಯವರು. ಅವರು ರೂಪಿಸಿದ ಈ ಸಂಸ್ಥೆಯ ಕನಸನ್ನು ನನಸು ಮಾಡುವ ಜವಾಬ್ದಾರಿ ವಿದ್ಯಾರ್ಥಿ ಸಮೂಹ ಮತ್ತು ಪಾಲಕರ ಮೇಲಿದೆ ಎಂದರು. .ವಿದ್ಯಾರ್ಥಿ ಸಂಸತ್ ಪದಾಧಿಕಾರಿ ದರ್ಶನ ಚಕ್ರಸಾಲಿ ಉಪಸ್ಥಿತರಿದ್ದರು.
ಬಿಂದು ಗೌಡ ಸಂಗಡಿಗರು ಪ್ರಾರ್ಥಿಸಿದರು. ಪ್ರೊ.ವಿಘ್ನೇಶ್ವರ ಭಟ್ ಸ್ವಾಗತಿಸಿದರು. ವಿದ್ಯಾರ್ಥಿ ಸಂಸತ್ ಪದಾಧಿಕಾರಿ ಅದಿತಿ ಪೈ ವಾರ್ಷಿಕ ವರದಿ ವಾಚಿಸಿದರು. ಪ್ರೊ.ಶ್ರೀಶೈಲ ಕೊಂಡಗೂಳಿಕರ ವಂದಿಸಿದರು. ಮಾನಸಾ ಹೆಗಡೆ, ಅನೂಷಾ ಭಟ್ಟ ನಿರೂಪಿಸಿದರು.

300x250 AD
Share This
300x250 AD
300x250 AD
300x250 AD
Back to top