ಸಿದ್ದಾಪುರ: ಯಾವ ರಂಗದಲ್ಲಿದ್ದರೂ ಅಂತರoಗ ಶುದ್ದವಾಗಿರಬೇಕು ಎಂದು ಹಿರಿಯ ಪತ್ರಕರ್ತ ರವೀಂದ್ರ ಭಟ್ಟ ಐನಕೈ ಹೇಳಿದರು.
ತಾಲೂಕಿನ ಕಲಗದ್ದೆಯ ಯಕ್ಷಗಾನ ಶ್ರೀ ನಾಟ್ಯ ವಿನಾಯಕ ದೇವಾಲಯದಲ್ಲಿ ಶ್ರೀದೇವರ ವಾರ್ಷಿಕೋತ್ಸವದಲ್ಲಿ ‘ಕಾರ್ಯದಕ್ಷ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಯಾವ ಪ್ರಶಸ್ತಿ ಸಿಕ್ಕರೂ ನಮ್ಮ ಊರಿನಲ್ಲಿ ಸಿಗೋ ಪ್ರಶಸ್ತಿ ದೊಡ್ಡದು. ನಾಟ್ಯ ವಿನಾಯಕ ಪ್ರಸಾದವಾಗಿ ಸ್ವೀಕರಿಸಿದ್ದೇನೆ ಎಂದರು.
ಹಿರಿಯ ಚಿತ್ರ ಕಲಾವಿದ ನೀರ್ನಳ್ಳಿ ರಾಮಕೃಷ್ಣ, ಮಲೆನಾಡಿನ ಕಾಡು ಉಳಿಸಿಕೊಳ್ಳಬೇಕು. ಈ ಭಾಗದ ಕಾಡು, ಜನರ ಪ್ರೀತಿ ಭಾವುಕವಾಗಿದೆ. ಕಲಾವಿದ ಭಾವನಾ ಜೀವಿಗಳು. ನನಗೆ ಲೋಕ ನೋಡುವ ಕುತೂಹಲ. ಪ್ರಪಂಚವೇ ನಂಬಿಕೆಯ ಮೇಲಿದೆ. ಭೂ ಮಂಡಲ ಸೂರ್ಯ ನಂಬಿದೆ. ನಾನು ಎಲ್ಲ ನಂಬಿಯೇ ಎಲ್ಲ ಹೆಜ್ಜೆ ಕುತೂಹಲದಿಂದ ನೋಡುತ್ತೇನೆ ಎಂದರು.
ಅಭಿನ0ದನಾ ನುಡಿ ಆಡಿದ ಪ್ರಸಿದ್ಧ ಅರ್ಥದಾರಿ ಮೋಹನ ಭಾಸ್ಕರ ಹೆಗಡೆ ಅವರು, ವಿನಯದಿಂದ ವಿದ್ವತ್ ಪಡೆದವರು. ಕೌಶಲ, ಗಾಢವಾದ ಪ್ರಯತ್ನದಿಂದ, ಅಭ್ಯಾಸದಿಂದ ಸರ್ವ ಮಾನ್ಯರಾದವರು. ಎಳೆಯರಲ್ಲೇ ಎತ್ತರದಲ್ಲಿ ಏರಿದವರು ಎಂದು ಬಣ್ಣಿಸಿದರು.
ಅತಿಥಿಗಳಾಗಿ ಪಾಲ್ಗೊಂಡ ಹಿರಿಯ ಜೋತಿಷಿ ಕಮಲಾಕರ ಭಟ್ಟ, ಶಿಲೆಗೆ ಪೆಟ್ಟು ಬಿದ್ದಾಗಲೆ ಚೆಂದದ ಮೂರ್ತಿ ಆಗುತ್ತದೆ. ಎಲ್ಲಿ ತಾನು, ತಾನೇ ಅವನೇ ಆಗದರೆ ಭಗವಂತ ಕಲ್ಪವೃಕ್ಷನಾಗುತ್ತನೆ. ಯಕ್ಷಗಾನ ಕಲಾ ಪ್ರದರ್ಶನ ಇಲ್ಲಿ ಕೂಡ ಆಗಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿದ್ವಾಂಸ ಅಡವಿತೋಟ ಕೃಷ್ಣ ಭಟ್ಟ, ಶ್ರೀಮತಿ ದೀಪಾ ಭಟ್ಟ ವೇದಿಕೆಯಲ್ಲಿ ಇದ್ದರು. ದೇವಸ್ಥಾನದ ಪ್ರಧಾನ ವಿಶ್ವಸ್ಥ ವಿನಾಯಕ ಹೆಗಡೆ ಕಲಗದ್ದೆ ಸ್ವಾಗತಿಸಿದರು. ಮಹೇಶ ಹೆಗಡೆ ಕೊಳಗಿ ಸಮ್ಮಾನ ಪತ್ರ ವಾಚಿಸಿದರು. ಆರ್.ಬಿ.ಹೆಗಡೆ ನಿರ್ವಹಿಸಿದರು.
ಚಂಡೆ, ನರ್ತನದ ಝೇಂಕಾರ
ಎರಡು ದಿನಗಳ ಯಕ್ಷಗಾನೋತ್ಸವ, ನೃತ್ಯೋತ್ಸವ ಕಲಗದ್ದೆ ಶಂಭು ಶಿಷ್ಯ ಪ್ರತಿಷ್ಠಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.ಪ್ರಥಮ ದಿನ ಲವಕುಶ ಆಖ್ಯಾನ ಪ್ರದರ್ಶನವಾಗಲಿದ್ದು, ಹಿಮ್ಮೇಳದಲ್ಲಿ ಪ್ರಸಿದ್ಧ ಭಾಗವ ಕೇಶವ ಹೆಗಡೆ ಕೊಳಗಿ, ಮಂಜುನಾಥ ಗುಡ್ಡೆದಿಂಬ, ಭಾರ್ಗವ ಹೆಗ್ಗೋಡು ಮುಮ್ಮೇಳದಲ್ಲಿ ವಿನಾಯಕ ಹೆಗಡೆ ಕಲಗದ್ದೆ, ಅಶೋಕ ಭಟ್ಟ ಸಿದ್ದಾಪುರ, ಮಹಾಬಲೇಶ್ವರ ಇಟಗಿ, ನಾಗೇಂದ್ರ ಭಟ್ಟ ಮೂರೂರು, ವೆಂಕಟೇಶ ಬೊಗ್ರಿಮಕ್ಕಿ, ಅವಿನಾಶ ಕೊಪ್ಪ, ಪ್ರವೀಣ ತಟ್ಟಿಸರ ಪಾಲ್ಗೊಂಡರು.
ಎರಡನೆ ದಿನ ಮಂಗಳೂರಿನ ಪೃಥ್ವಿ ಎಸ್.ರಾವ್ ಅವರಿಂದ ನೃತ್ಯಾರ್ಪಣೆ, ಬಳಿಕ ಚಿತ್ರದುರ್ಗದ ಶ್ರೀಮತಿ ಶ್ವೇತಾ ಮಂಜುನಾಥ, ಯಶ್ವಸ್ವಿನಿ ಎಂ.ಜಿ., ಕು. ಶಮಾ ಭಾಗ್ವತ್, ಕು. ಸುಖಿ ತಂಡದಿoದ ಭರತನಾಟ್ಯ ಪ್ರದರ್ಶನ, ಕೂಚುಪುಡಿ ನರ್ತನ, ಗಜಾನನ ಜನನ ನೃತ್ಯ ರೂಪಕ ಗಮನ ಸೆಳೆಯಿತು.
ಬಳಿಕ ಸುರಥಾಂಜನೇಯ ಯಕ್ಷಗಾನ ಪ್ರದರ್ಶನ ನಡೆಯಿತು. ಹಿಮ್ಮೇಳದಲ್ಲಿ ಪ್ರಸಿದ್ಧ ಭಾಗವ ಕೇಶವ ಹೆಗಡೆ ಕೊಳಗಿ, ಮಂಜುನಾಥ ಗುಡ್ಡೆದಿಂಬ, ಭಾರ್ಗವ ಹೆಗ್ಗೋಡು ಪಾಲ್ಗೊಂಡರು. ಮುಮ್ಮೇಳದಲ್ಲಿ ವಿನಾಯಕ ಹೆಗಡೆ ಕಲಗದ್ದೆ, ಗಣಪತಿ ಹೆಗಡೆ ತೋಟಿಮನೆ, ಮಹಾಬಲೇಶ್ವರ ಇಟಗಿ, ನಾಗೇಂದ್ರ ಭಟ್ಟ ಮೂರೂರು, ವೆಂಕಟೇಶ ಬೊಗ್ರಿಮಕ್ಕಿ, ಅವಿನಾಶ ಕೊಪ್ಪ, ತುಳಸಿ ಹೆಗಡೆ ಪಾಳ್ಗೊಂಡರು. ಪ್ರಸಾದನವನ್ನು ಎಂ.ಆರ್.ನಾಯ್ಕ ಕರ್ಸೇಬೈಲ್ ಒದಗಿಸಿದರು.