ಜೊಯಿಡಾ: ಬಜಾರಕುಣುಂಗ ಹಾಗೂ ಕಾತೇಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳಿಗೆ ಮೂಲಸೌಕರ್ಯ ಒದಗಿಸುವಂತೆ ಕುಣಬಿ ಮುಖಂಡ ಅಜಿತ್ ಮಿರಾಶಿ ಮುಂದಾಳತ್ವದಲ್ಲಿ ಔರಾದ- ಸದಾಶಿವಗಡ ರಾಜ್ಯ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ ನಡೆಸಲಾಗಿದೆ.
ರಸ್ತಾರೋಖೋ ಮಾಡಿ, ತಮ್ಮ ಬೇಡಿಕೆಗಳು ಇಡೇರುವ ತನಕ ಯಾವುದೇ ವಾಹನ ಸಂಚರಿಸಲು ಬಿಡುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದು ಪ್ರತಿಭಟಿಸಿದ್ದಾರೆ. ಎರಡು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದರೂ ಸರಿಯಾದ ಸಮಯಕ್ಕೆ ಸಂಬಂಧಿಸಿದ ಅಧಿಕಾರಿಗಳು ಬಾರದ ಕಾರಣ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆಯಿತು.
ಇನ್ನು ಇದೇ ವೇಳೆ ಸಿಪಿಐ ನಿತ್ಯಾನಂದ ಪಂಡಿತ್ ಮಧ್ಯಸ್ಥಿಕೆ ವಹಿಸಿ ಪ್ರತಿಭಟನೆ ತಿಳಿಗೊಳಿಸಲು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕುಣಬಿ ಸಮಾಜದ ಅಧ್ಯಕ್ಷ ಅಜಿತ್ ಮಿರಾಶಿ, ಸ್ವಾತಂತ್ರ‍್ಯ ಬಂದು 75 ವರ್ಷಗಳು ಕಳೆದರು ನಮ್ಮ ಜೊಯಿಡಾ ತಾಲೂಕಿನ ಹಳ್ಳಿಗಳಿಗೆ ಇನ್ನೂ ಮೂಲಸೌಕರ್ಯಗಳಿಲ್ಲ. ಮುಖ್ಯವಾಗಿ ಬೇಕಾದ ರಸ್ತೆ ಸಂಪರ್ಕ ಸರಿ ಇಲ್ಲ, ಸಾರಿಗೆ ವ್ಯವಸ್ಥೆ ಇಲ್ಲ. ಲೋಕೋಪಯೋಗಿ, ಅರಣ್ಯ, ಸಾರಿಗೆ ಇಲಾಖೆ ಅಧಿಕಾರಿಗಳು ನಮಗೆ ಉತ್ತರ ನೀಡಬೇಕು. ನಮ್ಮ ಹಳ್ಳಿಗಳಿಗೆ ಮೂಲಸೌಕರ್ಯ ವ್ಯವಸ್ಥೆ ಕಲ್ಪಿಸುವವರೆಗೂ ನಮ್ಮ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಹೇಳಿದರು.
ಮಾಜಿ ಶಾಸಕ ಸುನೀಲ್ ಹೆಗಡೆ ಮಾತನಾಡಿ, ಈ ಭಾಗದ ಜನರು ರಸ್ತೆ ಸಂಪರ್ಕ ಇಲ್ಲದೇ ಬಹಳಷ್ಟು ಕಷ್ಟ ಅನುಭವಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಇದ್ದ ರಸ್ತೆ ಮಾಡಲು ತೊಂದರೆ ಕೊಟ್ಟರೆ ಮುಂದಿನ ದಿನಗಳಲ್ಲಿ ನಿಮಗೂ ನಾವು ತೊಂದರೆ ಕೊಡಬೇಕಾಗುತ್ತದೆ. ನಿಮ್ಮಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ. ನಮ್ಮ ಸರ್ಕಾರದಿಂದ ಸಾಕಷ್ಟು ಅನುದಾನ ಜೊಯಿಡಾ ತಾಲೂಕಿಗೆ ಬಂದಿದೆ. ಆದರೆ ಇಲ್ಲಿನ ಅಧಿಕಾರಿಗಳ ಆಲಸ್ಯತನದಿಂದ ಮತ್ತು ಬೇಜಾವಾಬ್ದಾರಿಯಿಂದ ಜನರಿಗೆ ಮೂಲಸೌಕರ್ಯ ಸಿಗುತ್ತಿಲ್ಲ. ಅರಣ್ಯ ಇಲಾಕೆಗೆ ಒಂದು ನ್ಯಾಯ ಜನರಿಗೆ ಒಂದು ನ್ಯಾಯವೇ? ನಿಮಗೆ ಬೇಕಾದಲ್ಲಿ ನೀವು ರಸ್ತೆ, ಕಟ್ಟಡ ಕಟ್ಟುತ್ತೀರಿ. ಬಡಜನರಿಗೆ ರಸ್ತೆ ಆಗುವಾಗ ಅಡ್ಡಗಾಲು ಹಾಕಿ ಕಾನೂನು ಪುಸ್ತಕ ತೋರುತ್ತೀರಿ; ಇದು ಸರಿಯಲ್ಲ. ಕೂಡಲೇ ಇಲ್ಲಿನ ಜನರಿಗೆ ಅಗತ್ಯ ಸೌಲಭ್ಯ ಒದಗಿಸಿ ಜನರಿಗೆ ಅನುಕೂಲ ಮಾಡಿಕೊಡಿ ಎಂದರು.
ಕುoಬಾರವಾಡಾ ಗ್ರಾ.ಪಂ. ಮಾಜಿ ಅಧ್ಯಕ್ಷ ಮಂಗೇಶ ಕಾಮತ್, ಅರಣ್ಯ ಇಲಾಕೆಯವರು ನಮ್ಮ ತಾಲೂಕಿನ ಅಭಿವೃದ್ಧಿ ಕೆಲಸಗಳಿಗೆ ಅಡ್ಡಿ ಮಾಡುತ್ತಾ ಬಂದಿದ್ದಾರೆ. ಜನರು ಪ್ರತಿಭಟನೆ ಮಾಡಿದಾಗ ಜನರ ಸಮಸ್ಯೆ ಬಗೆಹರಿಸುವ ಭರವಸೆ ನೀಡಿ ಮತ್ತೆ ಇವರೆ ತೊಂದರೆ ನೀಡುತ್ತಾರೆ. ಸುಳ್ಳು ಹೇಳುವುದನ್ನು ಬಿಟ್ಟು ಜನರು ಬದುಕಲು ಅನುಕೂಲ ಮಾಡಿಕೊಡಿ ಎಂದರು.
ಸ್ಥಳಕ್ಕೆ ತಹಶೀಲ್ದಾರ ಪ್ರಮೋದ ನಾಯಕ, ಅರಣ್ಯ ಇಲಾಕೆಯ ಅಣಶಿ ಎ.ಸಿ.ಎಫ್ ಅಮರಾಕ್ಷರ, ವಲಯ ಅರಣ್ಯಾಧಿಕಾರಿ ಶಶಿಧರ ಪಾಟೀಲ್, ಲೋಕೋಪಯೋಗಿ ಇಲಾಕೆಯ ಅರುಣಕುಮಾರ್, ಜಿ.ಪಂ.ನ ಮಹಮ್ಮದ್ ಇಝಾನ್, ಪ್ರವೀಣಕುಮಾರ್, ದಾಂಡೇಲಿ ಬಸ್ ಡಿಪೋ ಮ್ಯಾನೇಜರ್ ಸೇರಿದಂತೆ ಇತರರು ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಬಜಾರಕುಣುಂಗ ಮತ್ತು ಕಾತೇಲಿ ಗ್ರಾಮದ ಸಂಬಂಧಿಸಿದ ಎಲ್ಲಾ ರಸ್ತೆಗಳನ್ನ ಸರಿಪಡಿಸುವ ಕಾರ್ಯ ಮತ್ತು ಒಂದು ವಾರದೊಳಗೆ ಬಸ್ ಸೌಕರ್ಯ ಒದಗಿಸುವ ಭರವಸೆ ನೀಡಿ ಸಹಿ ಹಾಕಿದರು. ತದನಂತರ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದುಕೊoಡರು.
ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಸದಸ್ಯ ರಮೇಶ ನಾಯ್ಕ, ಕುಂಬಾರವಾಡಾ ಗ್ರಾ.ಪಂ ಸದಸ್ಯ ದತ್ತಾ ನಾಯ್ಕ, ರತ್ನಾಕರ್ ದೇಸಾಯಿ, ನಾಗೋಡಾ ಗ್ರಾ.ಪಂ ಅಧ್ಯಕ್ಷ ದಿಗಂಬರ ದೇಸಾಯಿ, ವಿನಯ ದೇಸಾಯಿ, ಕುಣಬಿ ಜಿಲ್ಲಾಧ್ಯಕ್ಷ ಸುಭಾಷ ಗಾವಡಾ, ಕಾಳಿ ಬ್ರಿಗೇಡ್ ನ ರವಿ ರೆಡ್ಕರ್, ಕಬ್ಬುಬೆಳೆಗಾರರ ಸಂಘದ ಕುಮಾರ ಬೋಬಾಟೆ,ಬಿಜೆಪಿಯ ಶಿವಾಜಿ ಗೋಸಾವಿ, ಸಂತೋಷ ಸಾವಂತ್, ಗಿರೀಶ್ ಗೋಸಾವಿ, ಸಂತೋಷ ರೆಡ್ಕರ್, ಬಜಾರಕುಣುಂಗ ಹಾಗೂ ಕುಂಬಾರವಾಡಾ ಗ್ರಾ.ಪಂದ ಎರಡು ನೂರಕ್ಕೂ ಹೆಚ್ಚು ಸಾರ್ವಜನಿಕರು ಇದ್ದರು. ಪಿ.ಎಸ್.ಐ ಕಸ್ತೂರಿ ಕೆ., ರಾಮನಗರ ಪಿ.ಎಸ್.ಐ ಬಸವರಾಜ ಎಮ್., ಕ್ರೈಮ್ ಪಿಎಸ್‌ಐ ಲಕ್ಷ್ಮಣ ಪೂಜಾರ ಅವರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.