ಯಲ್ಲಾಪುರ: ಅಂಗಾರಕ ಸಂಕಷ್ಟಿಯoದು ತಾಲೂಕಿನ ಚಂದಗುಳಿ ದೇವಸ್ಥಾನಕ್ಕೆ ಸಾವಿ ಸಾವಿರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ, ಶ್ರೀಸಿದ್ದಿ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಿದರು.
ತಾಲೂಕಿನ ಶಕ್ತಿ ಗಣಪತಿ ಎಂದೇ ಗುರುತಿಸಿಕೊಂಡಿರುವ ಮಾಗೋಡ ಜಲಪಾತದ ಸಮೀಪ ಇರುವ ಚಂದಗುಳಿ ಶ್ರೀ ಸಿದ್ದಿ ವಿನಾಯಕ ದೇವಸ್ಥಾನಕ್ಕೆ ತಾಲೂಕಿನಲ್ಲಿ ಅಷ್ಟೇ ಅಲ್ಲದೆ, ಉತ್ತರಕನ್ನಡ ಜಿಲ್ಲೆ, ಪರ ಜಿಲ್ಲೆ, ಪರ ರಾಜ್ಯಗಳಿಂದ ಕೂಡ ಸಹಸ್ರಾರು ಸಂಖ್ಯೆಯ ಭಕ್ತರು ಬಂದು ಪೂಜೆ ಸಲ್ಲಿಸುತ್ತಾರೆ. ಈ ದೇವಸ್ಥಾನಕ್ಕೆ ಗಂಟೆಯೇ ಮುಖ್ಯ ಹರಕೆಯಾಗಿದೆ. ಹೀಗಾಗಿ, ದೇವಸ್ಥಾನದ ಸುತ್ತಮುತ್ತ ಸಾವಿರಾರು ಗಂಟೆಗಳನ್ನು ಕಾಣಬಹುದಾಗಿದೆ. ತಮ್ಮ ಬೇಡಿಕೆ ಇಷ್ಟಾರ್ಥಗಳು ಈಡೇರಿದಾಗ ಸಿದ್ದಿ ವಿನಾಯಕನಿಗೆ ಭಕ್ತರು ಗಂಟೆಯನ್ನು ಅರ್ಪಿಸುತ್ತಾರೆ.
ಮಂಗಳವಾರ ಅಂಗಾರಕ ಸಂಕಷ್ಟಿಯಾಗಿದ್ದು, ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಲು ತಾಲೂಕು, ಜಿಲ್ಲೆ, ಬೆಂಗಳೂರು, ಹುಬ್ಬಳ್ಳಿ- ಧಾರವಾಡ ಮಹಾನಗರ, ಗೋವಾ ಮಹಾರಾಷ್ಟ್ರದ ರಾಜ್ಯದಿಂದಲೂ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದ್ದಾರೆ. ಸ್ಥಳೀಯ ಅನೇಕ ಜನ ಯುವಕರು ಅಂಗಾರಕ ಸಂಕಷ್ಟಿಯoದು ಹತ್ತಾರು ಕಿಲೋ ಮೀಟರ್ ದೂರದ ಗಂಟೆ ಗಣಪತಿ ದೇವಸ್ಥಾನಕ್ಕೆ ಬರಿಗಾಲಿನಲ್ಲಿ ಪಾದಯಾತ್ರೆ ಮಾಡುವ ಮೂಲಕ ಸೇವೆ ಸಲ್ಲಿಸಿದ್ದಾರೆ. ಪಾದಯಾತ್ರೆಯ ಮೂಲಕ ಪ್ರತಿ ಅಂಗಾರಕ ಸಂಕಷ್ಟಿಯoದು ನೂರಾರು ಜನ ಭಕ್ತರು ಯಲ್ಲಾಪುರದಿಂದ ಮಾಗೋಡ ಮಾರ್ಗವಾಗಿ ಹೋಗುತ್ತಿರುವುದು ಕಾಣಿಸುತ್ತದೆ. ಪಟ್ಟಣ ಹಾಗೂ ಗ್ರಾಮೀಣ ಭಾಗದ ಬಹುತೇಕ ಗಣಪತಿ ದೇವಸ್ಥಾನಗಳಲ್ಲಿ ಅಂಗಾರಕ ಸಂಕಷ್ಟಿಯ ನಿಮಿತ್ತ ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು.