ಹೊನ್ನಾವರ: ಕ್ರೀಡೆಯಿಂದ ಆರೋಗ್ಯ ವೃದ್ಧಿಯಾಗುತ್ತದೆ. ಅಲ್ಲದೆ ನಾಯಕತ್ವ ಗುಣ, ಟೀಮ್ ವರ್ಕ್ ಸಹ ಕ್ರೀಡೆಯಿಂದ ಲಭಿಸುತ್ತದೆ. ಮನೋಬಲ ವೃದ್ಧಿಯಾಗುತ್ತದೆ ಎಂದು ವಕೀಲ ಸತೀಶ ಭಟ್ಟ ಉಳ್ಗೆರೆ ಹೇಳಿದರು.
ಎಂ.ಪಿ.ಇ ಸೊಸೈಟಿಯ ಸೆಂಟ್ರಲ್ ಸ್ಕೂಲ್ನಲ್ಲಿ ಕದಂಬ ಸಹೋದಯದ ಅಂತರ್ಶಾಲಾ 2022- 23ರ ಕ್ರೀಡಾಕೂಟ ಉದ್ಘಾಟಿಸಿದ ಮಾತನಾಡಿದ ಅವರು, ಎಲ್ಲರೂ ಮೊಬೈಲ್ನಿಂದ ಜ್ಞಾನವನ್ನು ಪಡೆಯುತ್ತಿದ್ದಾರೆ. ಕ್ರೀಡೆ ನಮ್ಮ ಜೀವನಕ್ಕೆ ಅತೀ ಮುಖ್ಯವಾದದ್ದು. ಸ್ಪರ್ಧೆ ಹಾಗೂ ಸೋಲನ್ನು ಕ್ರೀಡೆ ಕಲಿಸುತ್ತದೆ. ಸೋಲನ್ನು ಪಡೆದವರು ಸಹ ಜೀವನದಲ್ಲಿ ಯಶಸ್ಸನ್ನು ಪಡೆಯುವುದು ಹೇಗೆ ಎಂದು ಕಲಿಯುತ್ತಾರೆ. ನಾವು ಜೀವನಲ್ಲಿ ಪ್ರತಿಕ್ಷಣವೂ ಸ್ಪರ್ಧೆಯನ್ನು ಎದುರಿಸುತ್ತಿರುತ್ತೇವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂ.ಪಿ.ಇ ಸೊಸೈಟಿಯ ಜಂಟಿ ಕಾರ್ಯದರ್ಶಿ ಜಿ.ಪಿ.ಹೆಗಡೆ ಮಾತನಾಡಿ, ಸಿಬಿಎಸ್ಇ ಶಾಲೆಯ ವಿದ್ಯಾರ್ಥಿಗಳು ಶೈಕ್ಷಣಿಕ ಜ್ಞಾನವನ್ನು ಪಡೆಯುವುದರೊಟ್ಟಿಗೆ, ಕ್ರೀಡೆಯಲ್ಲೂ ಗಮನಾರ್ಹ ಸಾಧನೆಯನ್ನು ಮಾಡುತ್ತಿರುವುದು ಗಮನಾರ್ಹ. ಜ್ಞಾನದ ಜೊತೆ ಕೌಶಲ್ಯವೂ ಕೂಡ ಅತಿಮುಖ್ಯ. ಯಶಸ್ಸನ್ನು ಖುಷಿ ಪಟ್ಟಂತೆ ಸೋಲನ್ನು ಕೂಡ ಸಮಾನವಾಗಿ ತೆಗೆದುಕೊಳ್ಳಬೇಕು. ಯಶಸ್ಸು ಕಲಿಸಿದ ಪಾಠಕ್ಕಿಂತ ಸೋಲು ಹೆಚ್ಚಿನ ಪಾಠವನ್ನು ಕಲಿಸುತ್ತದೆ. ಕ್ರೀಡೆಯಲ್ಲಿ ಭಾಗವಹಿಸುವಿಕೆ ಮುಖ್ಯ. ಯಶಸ್ಸಿಗಾಗಿ ಹೋರಾಡಿ, ಜಯ ಲಭಿಸದಿದ್ದರೆ ನಿರಾಶರಾಗಬೇಡಿ ಎಂದು ನುಡಿದರು.
ಕದಂಬ ಸಹೋದಯ ಕ್ರೀಡಾಕೂಟದ ಬಗ್ಗೆ ವಿದ್ಯಾರ್ಥಿಗಳ ಕುರಿತು ಶ್ರೀಮಾರುತಿ ರೆಸಿಡೆನ್ಸಿಯಲ್ ಬಂಗಾರಮಕ್ಕಿ ಶಾಲೆಯ ಶೈಕ್ಷಣಿಕ ಸಲಹೆಗಾರ ಜಿ.ಟಿ.ಹೆಗಡೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಗಿಡಕ್ಕೆ ನೀರನ್ನು ಹಾಕುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಕ್ರೀಡಾಧ್ವಜ ಹಾರಿಸಿ, ಕದಂಬ ಸಹೋದಯದ ಹನ್ನೊಂದು ಶಾಲಾ ಮಕ್ಕಳಿಂದ ಪಥಸಂಚಲನ ನಡೆಸಿ ಕ್ರೀಡಾಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು. ಕೇಂದ್ರಿಯ ವಿದ್ಯಾಲಯದ ಪ್ರಾಚಾರ್ಯರಾದ ಕಾಂತಿ ಭಟ್ ಸ್ವಾಗತಿಸಿದರು. ಕದಂಬ ಸಹೋದಯದ ಕಾರ್ಯದರ್ಶಿ ವಂಸತ್ ಭಟ್, ಎಂ.ಪಿ.ಇ ಸೊಸೈಟಿಯ ಕಾರ್ಯದರ್ಶಿ ಎಸ್.ಎಂ.ಭಟ್ ವೇದಿಕೆ ಮೇಲೆ ಹಾಜರಿದ್ದರು.
ಎಂ.ಪಿ.ಇ. ಸೊಸೈಟಿಯ ಕಾರ್ಯನಿರ್ವಾಹಕ ಅಧಿಕಾರಿ ಕಿರಣ್ ಕುಡ್ತಾರ್ಕರ್ ಹಾಜರಿದ್ದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಉದ್ಯಮಿಗಳಾದ ಪ್ರಕಾಶ ಹೆಗಡೆ, ಕದಂಬ ಸಹೋದಯದ ಕಾರ್ಯದರ್ಶಿ ವಂಸತ್ ಭಟ್ ಆಗಮಿಸಿದ್ದರು. ಎಂ.ಪಿ.ಇ ಸೊಸೈಟಿಯ ಕಾರ್ಯದರ್ಶಿ ಎಸ್.ಎಂ.ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀಮಾರುತಿ ರೆಸಿಡೆನ್ಸಿಯಲ್ ಬಂಗಾರಮಕ್ಕಿ ಶಾಲೆಯ ಶೈಕ್ಷಣಿಕ ಸಲಹೆಗಾರ ಜಿ.ಟಿ.ಹೆಗಡೆ, ಎಂ.ಪಿ.ಇ ಸೊಸೈಟಿಯ ಕಾರ್ಯನಿರ್ವಾಹಕ ಅಧಿಕಾರಿ ಕಿರಣ್ ಕುಡ್ತಾರ್ಕರ್ ವೇದಿಕೆ ಮೇಲೆ ಉಪಸ್ಥಿತರಿದ್ದರು.
ನಂತರ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಶಿಕ್ಷಕಿ ಶಾರದಾ ಭಟ್ ಮತ್ತು ಶಿಲಿಕಾ ಪೆರೆರಾ ಸಭೆಗೆ ವಂದಿಸಿದರು. ವಿಜಯಲಕ್ಷ್ಮಿ ನಾಯ್ಕ ಹಾಗೂ ಸರಸ್ವತಿ ಅಯ್ಯಂಗಾರ್ ಕಾರ್ಯಕ್ರಮ ನಿರೂಪಿಸಿದರು.