ದಾಂಡೇಲಿ: ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳೆದ 5 ವರ್ಷಗಳಿಂದ ಆಡಳಿತ ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ರಾಜೇಶ್ ಪ್ರಸಾದ್ ಅವರು ಆಡಳಿತ ವೈದ್ಯಾಧಿಕಾರಿಯ ಹೆಚ್ಚುವರಿ ಕಾರ್ಯಭಾರಕ್ಕೆ ರಾಜೀನಾಮೆ ನೀಡಿದ್ದಾರೆಂದು ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ.
ಡಾ.ರಾಜೇಶ್ ಪ್ರಸಾದ್ ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿಗಳಿಗೆ ಆಡಳಿತ ವೈದ್ಯಾಧಿಕಾರಿಯ ಹೆಚ್ಚುವರಿ ಕಾರ್ಯಾಭಾರಕ್ಕೆ ಲಿಖಿತ ರಾಜಿನಾಮೆ ನೀಡಿದ್ದಾರೆ. ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ದರ್ಜೆ ಸಹಾಯಕ ಮತ್ತು ದ್ವಿತೀಯ ದರ್ಜೆ ಸಹಾಯಕ ಖಾಲಿ ಹುದ್ದೆಗಳಿಗೆ ನಿಯೋಜನೆ ಮೇಲೆ ಇರುವ ಪ್ರಥಮ ದರ್ಜೆ ಮತ್ತು ದ್ವಿತೀಯ ದರ್ಜೆ ಸಹಾಯಕರಿಬ್ಬರು ಅನಧಿಕೃತವಾಗಿ ಗೈರು ಹಾಜರಾಗುತ್ತಿರುವುದು ತಮ್ಮ ಗಮನಕ್ಕೆ ಬಂದಿದ್ದರೂ ಈವರೇಗೆ ಅವರ ಮೇಲೆ ಯಾವುದೆ ಕ್ರಮವನ್ನು ಕೈಗೊಂಡಿಲ್ಲ. ಅವರು ಅನಧಿಕೃತವಾಗಿ ಗೈರು ಹಾಜರಾಗುತ್ತಿರುವುದಲ್ಲದೇ ಅವರು ನಿರ್ವಹಿಸದೇ ಇರುವ ಕೆಲಸದ ಬಗ್ಗೆ ತಾವು ನೇರವಾಗಿ ಆಡಳಿತ ವೈದ್ಯಾಧಿಕಾರಿಯಾದ ನನ್ನನ್ನು ಹೊಣೆಯನ್ನಾಗಿ ಮಾಡಿರುವುದು ನನಗೆ ಮಾನಸಿಕವಾಗಿ ಹಿಂಸೆಯಾಗಿರುತ್ತದೆ. ಆದ್ದರಿಂದ ಆಡಳಿತ ವೈದ್ಯಾಧಿಕಾರಿಯ ಹೆಚ್ಚುವರಿ ಕಾರ್ಯಭಾರದಿಂದ ನಾನು ರಾಜಿನಾಮೆ ನೀಡುತ್ತಿದ್ದು, ಇದನ್ನು ಅಂಗೀಕರಿಸುವoತೆ ವಿನಂತಿಸಿದ್ದಾರೆ.
ಹಾಗೆ ನೋಡಿದರೆ ಸಿಬ್ಬಂದಿಗಳ ಕೊರತೆಯ ನಡುವೆಯು ದಾಂಡೇಲಿಯ ಸಾರ್ವಜನಿಕ ಆಸ್ಪತ್ರೆ ಖಾಸಗಿ ಆಸ್ಪತ್ರೆಗೆ ಏನು ಕಡಿಮೆಯಿಲ್ಲದಂತೆ ಡಾ.ರಾಜೇಶ್ ಪ್ರಸಾದ್ ಅವರ ನೇತೃತ್ವದಲ್ಲಿ ಸೇವೆ ಸಲ್ಲಿಸುತ್ತಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಇನ್ನೂ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಾತೃವಾತ್ಸಲ್ಯದಿಂದ ನರ್ಸ್ಗಳು ಬಿಡುವಿಲ್ಲದೇ ಕೆಲಸ ಮಾಡುತ್ತಿರುವುದರ ಬಗ್ಗೆಯೂ ಹಾಗೂ ಸಿಬ್ಬಂದಿಗಳು ಸೇರಿದಂತೆ ಡಿ. ದರ್ಜೆ ಮತ್ತು ಗುತ್ತಿಗೆ ನೌಕರರು ಸಹ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾ ಬರುತ್ತಿರುವುದರಿಂದಲೆ ಎಲ್ಲರ ನಂಬಿಕೆಯ ಆಸ್ಪತ್ರೆಯಾಗಿ ಸಾರ್ವಜನಿಕ ಆಸ್ಪತ್ರೆ ಹಲವು ಸಮಸ್ಯೆಗಳ ನಡುವೆಯು ಕಾರ್ಯನಿರ್ವಹಿಸುತ್ತಿದೆ. ಮತ್ತು ಅಷ್ಟೇ ಉತ್ತಮವಾಗಿ ಡಾ.ರಾಜೇಶ್ ಪ್ರಸಾದ್ ಅವರು ಸಹ ಸಾರ್ವಜನಿಕ ಆಸ್ಪತ್ರೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಸ್ವಚ್ಚತೆಯ ವಿಚಾರದಲ್ಲಿಯೂ ಸಾರ್ವಜನಿಕ ಆಸ್ಪತ್ರೆ ಸೈ ಎನಿಸಿಕೊಂಡಿದೆ.
ಕೋವಿಡ್ ಸಂದರ್ಭದಲ್ಲಿ ಡಾ.ರಾಜೇಶ್ ಪ್ರಸಾದ್ ಅವರ ನೇತೃತ್ವದಲ್ಲಿ ಸಾರ್ವಜನಿಕ ಆಸ್ಪತ್ರೆಯ ವೈದ್ಯರುಗಳು, ದಾದಿಯರು, ಸಿಬ್ಬಂದಿಗಳು ತಮ್ಮ ಜೀವದ ಹಂಗು ತೊರೆದು ಸೇವೆ ಸಲ್ಲಿಸಿರುವುದನ್ನು ಯಾರು ಮರೆಯುವಂತಿಲ್ಲ. ಮೊದಲ ಹಂತದ ಕೋವಿಡ್ ಸಂದರ್ಭದಲ್ಲಿ ವಾದ ವಿವಾದಗಳ ನಡುವೆಯು ಯಶಸ್ವಿಯಾಗಿ ಆರೋಗ್ಯ ಸೇವೆ ನೀಡಿದ ಹೆಗ್ಗಳಿಕೆ ಡಾ.ರಾಜೇಶ್ ಪ್ರಸಾದ್ ಅವರ ನೇತೃತ್ವದ ತಂಡಕ್ಕೆ ಸಲ್ಲಲೆಬೇಕು. ಕೋವಿಡ್ ಒಂದನೆ ಅಲೆಯಲ್ಲಿ ಒಟ್ಟು 1176 ಕೋವಿಡ್ ಸೋಂಕಿತರಿಗೆ, ಕೋವಿಡ್ ಎರಡನೇ ಅಲೆಯಲ್ಲಿ 2653 ಸೋಂಕಿತರಿಗೆ ಮತ್ತು ಕೋವಿಡ್ 3ನೇ ಅಲೆಯಲ್ಲಿ 1157 ಸೋಂಕಿತರಿಗೆ ವಿವಿಧ ರೀತಿಗಳಲ್ಲಿ ಆರೋಗ್ಯ ಸೇವೆ ನೀಡಿದ್ದರೇ, ಕೋವಿಡ್ ಪ್ರಥಮ ಅಲೆಯಲ್ಲಿ 942 ಸೋಂಕಿತರು, ಎರಡನೇ ಅಲೆಯಲ್ಲಿ 332 ಸೋಂಕಿತರು ಮತ್ತು ಮೂರನೆ ಅಲೆಯಲ್ಲಿ 25 ಸೋಂಕಿತಗೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಚಿಕಿತ್ಸಯೆನ್ನು ನೀಡಲಾಗಿದೆ. ಕೋವಿಡ್ 1, 2 ಮತ್ತು 3ನೇ ಅಲೆ ಸೇರಿದಂತೆ ಒಟ್ಟು 4986 ಸೋಂಕಿತರಿಗೆ ಆರೋಗ್ಯ ಸೇವೆಯ ಜೊತೆಗೆ ಅವರಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿದ ಕಾರ್ಯವನ್ನು ಡಾ.ರಾಜೇಶ್ ಪ್ರಸಾದ್ ನೇತೃತ್ವದ ತಂಡ ಮಾಡಿದೆ ಎನ್ನುವುದು ಇಲ್ಲಿ ಉಲ್ಲೇಖನೀಯ.
ಅತ್ಯುತ್ತಮ ಕಾರ್ಯನಿರ್ವಹಣೆ ಮಾಡುತ್ತಾ ಬಂದಿರುವ ಡಾ.ರಾಜೇಶ್ ಪ್ರಸಾದ್ ಅವರು ಆಡಳಿತ ವೈದ್ಯಾಧಿಕಾರಿಯ ಹೆಚ್ಚುವರಿ ಕಾರ್ಯಾಭಾರಕ್ಕೆ ರಾಜಿನಾಮೆ ನೀಡಿರುವುದು ನಗರದ ಜನತೆಯಲ್ಲಿ ಬೇಸರವನ್ನು ತಂದೊಡ್ಡಿದೆ. ಸಾರ್ವಜನಿಕ ಆಸ್ಪತ್ರೆ ಸುಸೂತ್ರವಾಗಿ ನಡೆಯಲು ಅಲ್ಲಿರುವ ಸಮಸ್ಯೆಗಳನ್ನು ಶಮನಗೊಳಿಸಿ, ಡಾ.ರಾಜೇಶ್ ಪ್ರಸಾದ್ ಅವರನ್ನೆ ಆಡಳಿತ ವೈದ್ಯಾಧಿಕಾರಿಯನ್ನಾಗಿ ಮುಂದುವರಿಸಬೇಕಾದ ಗುರುತರ ಜವಾಬ್ದಾರಿ ಜಿಲ್ಲಾ ವೈದ್ಯಾಧಿಕಾರಿಯವರ ಮೇಲಿದೆ. ದಾಂಡೇಲಿ ಜನತೆಯ ಹಿತದೃಷ್ಟಿಯಿಂದಲೂ ಈ ಕಾರ್ಯ ಅತೀ ಶೀಘ್ರದಲ್ಲಿ ಆಗಬೇಕಾಗಿದೆ.