ಕುಮಟಾ: ನಾವು ಮಾಡುವ ಉದ್ಯೋಗದಲ್ಲಿ ನಂಬಿಕೆ ಮತ್ತು ಆಸಕ್ತಿಯಿರಬೇಕು ಮತ್ತು ಸಿಕ್ಕಿರುವ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು ಎಂದು ಮಲ್ಲಾಪುರ ಗುರುಪ್ರಸಾದ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎಂ.ಟಿ.ಗೌಡ ಕಿವಿಮಾತು ಹೇಳಿದರು.
ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಹಮ್ಮಿಕೊಂಡಿರುವ 30 ದಿನಗಳ ಏರ್ ಕಂಡೀಶನರ್ ಮತ್ತು ರೆಫ್ರಿಜರೇಟರ್ ದುರಸ್ತಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಏರ್ ಕಂಡೀಶನರ್ ಮತ್ತು ರೆಫ್ರಿಜರೇಟರ್ ರಿಪೇರಿ ಉದ್ಯೋಗಕ್ಕೆ ಇಂದಿನ ದಿನದಲ್ಲಿ ಅಪಾರವಾದ ಬೇಡಿಕೆಯಿದೆ. ಯಾವುದೇ ಉದ್ಯೋಗವಿಲ್ಲದೆ ಜೀವನ ಮಾಡಲು ಸಾಧ್ಯವಿಲ್ಲ. ಪ್ರತಿಯೊಬ್ಬ ವ್ಯಕ್ತಿಗೆ ದೈಹಿಕ ಬಲ, ಮನೋಬಲ ಮತ್ತು ಆರ್ಥಿಕ ಬಲ ಇರಬೇಕು ಎಂದ ಅವರು, ಈ ತರಬೇತಿಯಲ್ಲಿ ಕಲಿತ ವಿಷಯವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸ್ವಂತ ಉದ್ಯೋಗ ಮಾಡುವುದರ ಮೂಲಕ ಒಳ್ಳೆಯ ಯಶಸ್ವಿ ಉದ್ಯಮಿಗಳಾಗಬಹುದು ಮತ್ತು ಗ್ರಾಹಕರಿಗೆ ಸರಿಯಾದ ಸೇವೆಯನ್ನು ನೀಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಏರ್ ಕಂಡೀಶನರ್ ಮತ್ತು ರೆಫ್ರಿಜರೇಟರ್ ರಿಪೇರಿ ತರಬೇತಿಯ ಸಂಪನ್ಮೂಲ ವ್ಯಕ್ತಿ ಆಗ್ನೇಲ್ ಫರ್ನಾಂಡಿಸ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಸ್ವಾಗತವನ್ನು ಸಂಸ್ಥೆಯ ಉಪನ್ಯಾಸಕ ಗೌರೀಶ ನಾಯ್ಕರವರು ಮಾಡಿದರು. ಉಪನ್ಯಾಸಕಿ ಮಮತಾ ನಾಯ್ಕ ಧನ್ಯವಾದ ಸಮರ್ಪಿಸಿದರು. ಶಿಬಿರಾರ್ಥಿ ಬಸಪ್ಪ ಪ್ರಾರ್ಥನೆ ಮಾಡಿದರು.