ಯಲ್ಲಾಪುರ: ವಾಹನವನ್ನು ಅತೀ ವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿ, ಅಪಘಾತಪಡಿಸಿ 1 ವರ್ಷದ ಮಗುವಿನ ಸಾವಿಗೆ ಕಾರಣವಾದ ಚಾಲಕನಿಗೆ ಸಿವಿಲ್ ನ್ಯಾಯಾಧೀಶರಾದ ಲಕ್ಷ್ಮಿಬಾಯಿ ಪಾಟೀಲ್ ಅವರು, ಒಂದು ಸಾವಿರ ರೂ. ದಂಡ ಹಾಗೂ ಒಂದು ವರ್ಷ ಸಾದಾ ಕಾರಾಗೃಹವಾಸ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
21 ನವೆಂಬರ್ 2017ರಂದು ತಾಲೂಕಿನ ಕುಂಬ್ರಾಳ ಮತ್ತು ಸಾತೋಡಿ ಜಲಪಾತದ ಮಧ್ಯೆ ನಿರ್ಮಿಸಲಾಗುತ್ತಿದ್ದ ಹೊಸ ರಸ್ತೆಯಲ್ಲಿ ಆರೋಪಿ ಚಾಲಕ ಮೌಲಾಲಿ ಅಮೀರಜಾನ್ ಶೇಖ್ ಈತನು ರಸ್ತೆಯ ಕೆಲಸಕ್ಕೆ ಬಂದಿದ್ದ ಮಹೀಂದ್ರಾ ಬೊಲೆರೋ ಪಿಕಪ್ ವಾಹನವನ್ನು ವೇಗವಾಗಿ ಚಲಾಯಿಸಿ ರಸ್ತೆಯ ಮೇಲಿನಜೆಲ್ಲಿ ಕಲ್ಲು ಸಿಡಿದು ರಸ್ತೆ ಪಕ್ಕ ಮಲಗಿಸಿಟ್ಟ ಅರ್ಪಿತಾ ಸಣ್ಣಪ್ಪ ಹರಿಜನ (ರಸ್ತೆ ಕೆಲಸಗಾರರ ಒಂದು ವರ್ಷ ಎರಡು ತಿಂಗಳ ಮಗು) ಎಂಬಾಕೆಯ ಸಾವಿಗೆ ಕಾರಣನಾಗಿದ್ದ, ಪ್ರಕರಣದ ತನಿಖಾಧಿಕಾರಿ ಪಿ.ಐ ಮಂಜುನಾಥ ನಾಯಕ, ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ಆರೋಪಿತನ ಮೇಲೆ ಆಪಾದಿಸಿದಂತೆ ಅಪರಾಧವೆಸಗಿದ್ದು ಪ್ರಕರಣದಲ್ಲಿ ಸಾಬೀತಾಗಿದೆಯೆಂದು 4 ಜನವರಿ 2023 ರಂದು ನ್ಯಾಯಾಲಯ ಶಿಕ್ಷೆಯನ್ನು ಪ್ರಕಟಿಸಿದೆ. ಈ ಪ್ರಕರಣದಲ್ಲಿ ಸಹಾಯಕ ಸರಕಾರಿ ವಕೀಲ ಝೀನತ್‌ಬಾನು ಇಬ್ರಾಹಿಂಸಾಬ್ ಶೇಖ್ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.