ಶಿರಸಿ: ಸಾಮಾಜಿಕ ಜಾಲತಾಣಗಳಲ್ಲಿ ವಕೀಲರ ಕುರಿತು ಆಕ್ಷೇಪಾರ್ಹ ಬರಹ ಬರೆದು ವಿಕೃತಿ ತೋರಿದ್ದ ನಗರದ ಮರಾಠಿಕೊಪ್ಪದ ವಿಘ್ನೇಶ್ ರೇವಣಕರ್ ಎಂಬಾತನ ಮೇಲೆ ಹೊಸ ಮಾರುಕಟ್ಟೆ ಠಾಣೆಯ ಪೊಲೀಸರು ಐಪಿಸಿ ಸೆಕ್ಷನ್ 107ರ ಅಡಿಯಲ್ಲಿ ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದಾರೆ.
ಸದಾ ಸಾಮಾಜಿಕ ಜಾಲತಾಣದಲ್ಲಿ ಪತ್ರಕರ್ತರು ಹಾಗೂ ಸರ್ಕಾರಿ ಅಧಿಕಾರಿಗಳು ಸೇರಿದಂತೆ ಗೌರವಾನ್ವಿತ ವ್ಯಕ್ತಿಗಳ ಮೇಲೆ ಆಕ್ಷೇಪಾರ್ಹ ಪದದಿಂದ ನಿಂದಿಸುತ್ತ ಕಾಲಹರಣ ಮಾಡುತ್ತಿದ್ದ ಈತನ ಮೇಲೆ ಈ ಹಿಂದೆ ಸಹ ಸಮುದಾಯವೊಂದನ್ನು ನಿಂದಿಸಿದ ಕಾರಣಕ್ಕೆ ಸಮುದಾಯದ ದೂರಿನ ಮೇರೆಗೆ ಹೊಸ ಮಾರುಕಟ್ಟೆ ಠಾಣೆ ಪೊಲೀಸರು ಆರೋಪಿಯನ್ನು ಠಾಣೆಗೆ ಕರೆಸಿ ಎಚ್ಚರಿಕೆ ನೀಡಿ ಮುಚ್ಚಳಿಕೆ ಬರೆಸಿಬಿಟ್ಟು ಕಳಿಸಿದ್ದರು. ಆದರೂ ಬುದ್ಧಿ ಕಲಿಯದ ಕಿಡಿಗೇಡಿ ಈಗ ವಕೀಲರನ್ನು ನಿಂದಿಸಿ ತನ್ನ ಕುಕೃತ್ಯ ಮುಂದುವರಿಸಿ ವಕೀಲರ ಕೆಂಗಣ್ಣಿಗೆ ಗುರಿಯಾಗಿದ್ದಾನೆ.
ಅಲ್ಲದೇ ಕಳೆದ ಎರಡು ದಿನಗಳ ಹಿಂದೆ ಶಿವಮೊಗ್ಗದಿಂದ ಆಗಮಿಸಿದ ಪ್ರವಾಸಿಗರ ಗುಂಪು ಶಿರಸಿಯಲ್ಲಿ ಓರ್ವ ಲಾರಿ ಚಾಲಕ ಸೇರಿದಂತೆ ಸಾರ್ವಜನಿಕರ ಮೇಲೆ ಮಾಡಿ ನಾಪತ್ತೆಯಾಗುವ ಸಂದರ್ಭದಲ್ಲಿ ಮಂಚಿಕೇರಿ ಬಳಿ ಆರೋಪಿಗಳನ್ನು ಪೋಲಿಸರು ತಡೆದು ಶಿರಸಿಗೆ ಕರೆ ತಂದಿದ್ದರು. ಆ ಸಂದರ್ಭದಲ್ಲಿ ಕೆಲವು ವಕೀಲರು ಅವರ ವೃತ್ತಿ ಧರ್ಮದಂತೆ ಆರೋಪಿತರ ಪರವಾಗಿ ವಕಾಲತ್ತನ್ನು ಹಾಕಲು ಪೊಲೀಸ್ ಠಾಣೆಯ ಬಳಿ ತೆರಳಿದ್ದರು. ಇದೇ ಕಾರಣಕ್ಕೆ ಶಿರಸಿ ವಕೀಲರ ಸಮುದಾಯದ ಕುರಿತು ಅವಹೇಳನಕಾರಿ ಹಾಗೂ ಅಶ್ಲೀಲ ಪದವನ್ನು ಬಳಸಿ ವಕೀಲರ ವಿರುದ್ಧ ಫೇಸ್ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಕುರಿತು ವಕೀಲರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ ಮಾರುಕಟ್ಟೆ ಠಾಣೆ ಪೊಲೀಸರು ಐಪಿಸಿ 107ರ ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದು, ಪಿಎಸ್ ಭೀಮಾಶಂಕರ ತನಿಖೆ ಕೈಗೊಂಡಿದ್ದಾರೆ.
ವಕೀಲ ಸಮುದಾಯದ ವಿರುದ್ಧ ಆಕ್ಷೇಪಾರ್ಹ ಬರಹ; ಪ್ರಕರಣ ದಾಖಲು
