ಭಟ್ಕಳ: ಬಾಂಬ್ ಬ್ಲಾಸ್ಟ್ ಮಾಡುವುದಾಗಿ ಇಲ್ಲಿನ ಪೊಲೀಸ್ ಠಾಣೆಗೆ ಹುಸಿ ಬೆದರಿಕೆ ಪತ್ರ ಬರೆದಿದ್ದ ಬಳ್ಳಾರಿಯ ಹೊಸಪೇಟೆ ಮೂಲದ ಹನುಮಂತ ಎನ್ನುವ ಆರೋಪಿಯನ್ನ ಚೆನ್ನೈ ಪೊಲೀಸರು ಬಂಧಿಸಿದ್ದಾರೆ.
ಡಿ.16ರoದು ನಗರ ಪೊಲೀಸ್ ಠಾಣೆಗೆ ‘ನೆಕ್ಸ್ಟ್ ಟಾರ್ಗೆಟ್ ಡಿಸೆಂಬರ್ 25, ಹ್ಯಾಪಿ ನ್ಯೂ ಇಯರ್ 2023 ಬ್ಲಾಸ್ಟ್’ ಎಂದು ಪತ್ರವೊಂದು ಬಂದಿತ್ತು. ಈಗಾಗಲೇ ಉಗ್ರ ಚಟುವಟಿಕೆಯಲ್ಲಿ ತೊಡಗಿದ್ದ ಭಟ್ಕಳ ಮೂಲದ ಕೆಲವರನ್ನ ಬಂಧಿಸಿದ್ದ ಕಾರಣ ಪಟ್ಟಣ ಸೂಕ್ಷ್ಮ ಪ್ರದೇಶವಾಗಿದ್ದು, ಇದರ ನಡುವೆ ಬಾಂಬ್ ಬ್ಲಾಸ್ಟ್ ಕುರಿತು ಅನಾಮಧೇಯ ಪತ್ರ ಬಂದಿದ್ದು ಸಾಕಷ್ಟು ತಲೆನೋವು ತಂದಿತ್ತು.
ಹೀಗಾಗಿ ಪತ್ರ ಎಲ್ಲಿಂದ ಬಂದಿದೆ ಎಂದು ಬೆನ್ನತ್ತಿದ್ದ ಪೊಲೀಸರಿಗೆ ತಮಿಳುನಾಡಿನ ಪುಲಿಯಂತೋಪ್ ಕಮಿಷನರೇಟ್ ವ್ಯಾಪ್ತಿಯಲ್ಲಿರುವ ಪೊಲೀಸ್ ಠಾಣೆಗೆ ಇದೇ ಸಮಯದಲ್ಲಿ ಇಂಥoದ್ದೇ ಪತ್ರ ಬರೆದಿರುವ ಮಾಹಿತಿ ಲಭ್ಯವಾಗಿತ್ತು. ಈ ಪ್ರಕರಣದಲ್ಲಿ ಅದಾಗಲೇ ತನಿಖೆ ಕೈಗೊಂಡಿದ್ದ ಚೆನ್ನೈ ಪೊಲೀಸರು, ಅಂತಿಮವಾಗಿ ಆರೋಪಿಯನ್ನೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಆರೋಪಿಯನ್ನು ಭಟ್ಕಳಕ್ಕೆ ಬಾಡಿ ವಾರಂಟ್ ಮೇಲೆ ಕರೆತರಲು ಇಲ್ಲಿನ ಪೊಲೀಸರು ಸಿದ್ಧತೆ ನಡೆಸಿದ್ದು, ಇನ್ನೂ ಹೆಚ್ಚಿನ ವಿಚಾರಣೆ ಕೈಗೊಳ್ಳುವ ಸಾಧ್ಯತೆ ಇದೆ.
ಕಳ್ಳತನ ಪ್ರಕರಣ ಮುಚ್ಚಿಡಲು ಹುಸಿ ಪತ್ರ!!
ಆರೋಪಿ ಹನುಮಂತ ಕಳ್ಳತನ ಪ್ರಕರಣವೊಂದನ್ನ ಮುಚ್ಚಿಡಲು ಈ ರೀತಿ ಬಾಂಬ್ ಬ್ಲಾಸ್ಟ್ ಹುಸಿ ಪತ್ರವನ್ನ ಬರೆದಿದ್ದ ಎನ್ನುವ ಅಂಶ ಪೊಲೀಸ್ ತನಿಖೆ ವೇಳೆ ತಿಳಿದುಬಂದಿದೆ.
ಬೆoಗಳೂರಿನ ವೈಟ್ ಫೀಲ್ಡ್ನಲ್ಲಿ ಹನುಮಂತ ಲ್ಯಾಪ್‌ಟಾಪ್ ಒಂದನ್ನು ಕದ್ದಿದ್ದನು. ಲ್ಯಾಪ್‌ಟಾಪ್ ರಿಪೇರಿಗೆ ಚೆನ್ನೈನಲ್ಲಿರುವ ಅಂಗಡಿಯೊoದಕ್ಕೆ ನೀಡಿದಾಗ ಲ್ಯಾಪ್‌ಟಾಪ್ ಪಾಸ್‌ವರ್ಡ್ ಕೇಳಲಾಗಿತ್ತು. ಆದರೆ ಹನುಮಂತ ಪಾಸ್‌ವರ್ಡ್ ಹೇಳಲು ಹಿಂಜರಿದಾಗ ಅಂಗಡಿ ಮಾಲೀಕನಿಗೆ ಇದು ಕದ್ದ ಲ್ಯಾಪ್ ಟಾಪ್ ಎಂದು ಅನುಮಾನ ಬಂದು ಪ್ರಶ್ನೆ ಮಾಡಲಾರಂಭಿಸಿದ್ದಾನೆ. ತಕ್ಷಣ ಸ್ಥಳದಿಂದ ಕಾಲ್ಕಿತ್ತ ಹನುಮಂತ, ವಾಪಸ್ ಬೆಂಗಳೂರಿಗೆ ಬಂದಿದ್ದ.
ಪೊಲೀಸರಿಗೆ ದೂರು ಕೊಡಬಹುದು ಎನ್ನುವ ಆತಂಕದಿoದ ಅಂಗಡಿ ಮಾಲೀಕನ ಮೊಬೈಲ್‌ಗೆ ಕರೆ ಮಾಡಿದ್ದ ಹನುಮಂತ, ಜೀವ ಬೆದರಿಕೆ ಹಾಕಿದ್ದ. ಅಲ್ಲದೇ ಕಳ್ಳತನದ ವಿಷಯ ಪೊಲೀಸರಿಗೆ ತಿಳಿಸಿದರೆ ನಿನ್ನನ್ನೇ ಪೊಲೀಸರಿಗೆ ಹಿಡಿದುಕೊಡುತ್ತೇನೆ ಎಂದು ಹೆದರಿಸಿದ್ದನಂತೆ.
ಅಷ್ಟಕ್ಕೇ ಸುಮ್ಮನಾಗದೆ, ಅಂಗಡಿಯವನ ಮೇಲೆ ಸೇಡು ತೀರಿಸಿಕೊಳ್ಳಲು ಹನುಮಂತ ಭಟ್ಕಳ ಹಾಗೂ ತಮಿಳುನಾಡು ಪೊಲೀಸರಿಗೆ ಬಾಂಬ್ ಬ್ಲಾಸ್ಟ್ ಮಾಡುವುದಾಗಿ ಅಂಗಡಿ ಮಾಲೀಕನ ಮೊಬೈಲ್ ನಂಬರಿನ ಜೊತೆ ಹುಸಿ ಬೆದರಿಕೆ ಪತ್ರ ಬರೆದಿದ್ದ. ಪೊಲೀಸರು ಪತ್ರದಲ್ಲಿದ್ದ ನಂಬರಿನ ಆಧಾರದಲ್ಲಿ ವಿಚಾರಣೆ ನಡೆಸಿದಾಗ ಆರೋಪಿಯ ಹಕೀಕತ್ತು ಬಯಲಿಗೆ ಬಂದಿದೆ.
ನಕಲಿ ದಾಖಲೆ ನೀಡಿ ಸಿಮ್ ಖರೀದಿ…
ಆರೋಪಿ ಹನುಮಂತ ನಕಲಿ ದಾಖಲೆ ನೀಡಿ ಸಿಮ್ ಖರೀದಿ ಮಾಡಿರುವುದು ಕೂಡ ತನಿಖೆ ವೇಳೆ ತಿಳಿದುಬಂದಿದೆ. ಸುಳ್ಯದ ಆಟೋ ಚಾಲಕ ತೇಜುಕುಮಾರ್ ಎನ್ನುವವರ ಡಾಕ್ಯುಮೆಂಟ್ ಪಡೆದು ತನ್ನ ಫೋಟೋ ಕೊಟ್ಟು ಸಿಮ್ ಖರೀದಿ ಮಾಡಿದ್ದ. ಅಲ್ಲದೇ ಎರಡೂ ಪೊಲೀಸ್ ಠಾಣೆಗಳಿಗೆ ಧರ್ಮಸ್ಥಳದಿಂದ ಈತ ಬೆದರಿಕೆ ಪತ್ರ ಬರೆದಿದ್ದನಂತೆ.
ಕೋಟ್…
ಭಟ್ಕಳ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಇನ್ಸ್ಪೆಕ್ಟರ್ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ. ಆರೋಪಿ ಈ ಹಿಂದೆ ಭಟ್ಕಳಕ್ಕೆ ಬಂದಿರುವ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಭಟ್ಕಳಕ್ಕೇ ಯಾಕಾಗಿ ಬೆದರಿಕೆ ಪತ್ರ ಬರೆದಿದ್ದ ಎಂಬುದನ್ನ ವಿಚಾರಣೆ ನಡೆಸುತ್ತೇವೆ.
• ಜಯಕುಮಾರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ