ಶಿರಸಿ: ರಾಜ್ಯ ಸರ್ಕಾರದ ಬಜೆಟ್‌ನಲ್ಲಿ (2023-24) ಮಲೆನಾಡು ಸುಸ್ಥಿರ ಅಭಿವೃದ್ಧಿ ಅಜೆಂಡಾ ಸೇರ್ಪಡೆ ಮಾಡಬೇಕು. ಈ ಕುರಿತು ವಿಶೇಷ ಕಾರ್ಯಯೋಜನೆ ರೂಪಿಸಿ ಜಾರಿ ಮಾಡಬೇಕು ಎಂಬ ಶಿಫಾರಸು ಪ್ರಸ್ತಾವನೆಯನ್ನು ಸಿದ್ಧಪಡಿಸುವ ಸಲುವಾಗಿ ವಿಶೇಷ ಸಮಾಲೋಚನಾ ಸಭೆಯನ್ನು ಜ. 8ರಂದು ಬೆಳಿಗ್ಗೆ 10-30ಕ್ಕೆ ಏರ್ಪಡಿಸಲಾಗಿದೆ. ಎ.ಪಿ.ಎಂ.ಸಿ. ಯಾರ್ಡ ಶಿರಸಿಯ ಕದಂಬ ಮಾರ್ಕೆಟಿಂಗ್ ಸಭಾಭವನದಲ್ಲಿ ನಡೆಯಲಿರುವ ಸಮಾಲೋಚನಾ ಸಭೆಯು ಕದಂಬ ಸಾವಯವ ಟ್ರಸ್ಟ, ಶಾರದಾಂಬಾ ಗ್ರಾಮೀಣಾಭಿವೃದ್ಧಿ ಶಿಕ್ಷಣ ಸಂಸ್ಥೆ, ವೃಕ್ಷಲಕ್ಷ ಆಂದೋಲನ ಶ್ರೀ ಸ್ವರ್ಣವಲ್ಲೀ ಕೃಷಿ ಪ್ರತಿಷ್ಠಾನ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯಲಿದೆ. ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದು, ಜೀವವೈವಿಧ್ಯ ಮಂಡಳಿ ನಿಕಟಪೂರ್ವ ಅಧ್ಯಕ್ಷರಾದ ಅನಂತ ಹೆಗಡೆ ಅಶೀಸರ ಅಧ್ಯಕ್ಷತೆ ವಹಿಸಲಿದ್ದಾರೆ.
ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಸಾವಯವ, ಜೀವವೈವಿಧ್ಯ, ಸಾಂಬಾರು ಬೆಳೆ, ಸೋಲಾರ್, ಜೇನುಕೃಷಿ, ಹನಿನೀರಾವರಿ, ಕೃಷಿ ಅರಣ್ಯ, ಬೆಟ್ಟ ಅಭಿವೃದ್ಧಿ ಸೇರಿದಂತೆ ಮಲೆನಾಡಿನ ಸಮಗ್ರ ಸುಸ್ಥಿರ ಅಭಿವೃದ್ಧಿ ಕುರಿತು ಕೈಗೊಳ್ಳಬೇಕಾದ ಕಾರ್ಯಯೋಜನೆಗಳ ಬಗ್ಗೆ ಪ್ರಗತಿಪರ ರೈತರು, ವಿಷಯ ತಜ್ಞರು, ಸಂಘ ಸಂಸ್ಥೆಗಳು, ಅಭಿಪ್ರಾಯ ಸಲಹೆ ನೀಡಲಿದ್ದಾರೆ. ಮಲೆನಾಡಿನ ಜಿಲ್ಲೆಗಳ ಕೃಷಿ, ಸಾವಯವ, ಗೋ ಸೇವಾ, ಪರಿಸರ ಕಾರ್ಯಕರ್ತರು, ಮುಖಂಡರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅರಣ್ಯ, ಕೃಷಿ, ತೋಟಗಾರಿಕಾ ಕಾಲೇಜು ಮತ್ತು ಅರಣ್ಯ ಕೃಷಿ ತೋಟಗಾರಿಕಾ ಇಲಾಖೆಗಳವರನ್ನು ಆಹ್ವಾನಿಸಲಾಗಿದೆ. ಈಗಾಗಲೇ ಸಾಗರ, ಹೊಸನಗರಗಳಲ್ಲಿ, ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯದಲ್ಲಿ ಮಲೆನಾಡು ಸುಸ್ಥಿರ ಅಭಿವೃದ್ಧಿ ಕುರಿತು ಸಮಾಲೋಚನಾ ಸಭೆಗಳನ್ನು ನಡೆಸಲಾಗಿದ್ದು, ಜನವರಿ 8 ರ ಸಭೆ ನಂತರ ವಿಧಾನಸಭಾಧ್ಯಕ್ಷರ ನೇತೃತ್ವದಲ್ಲಿ ಮುಖ್ಯಮಂತ್ರಿಗಳಿಗೆ ಮಲೆನಾಡು ಅಭಿವೃದ್ಧಿ ಅಜೆಂಡಾ ಪ್ರಸ್ತಾವನೆ – ಶಿಫಾರಸು ಸಲ್ಲಿಸುವ ಉದ್ದೇಶ ಹೊಂದಲಾಗಿದೆ.