ಕುಮಟಾ: ಗಿರಿಜನರನ್ನು ಸಂಘಟಿಸುವ ಉದ್ದೇಶದಿಂದ ಜ.7 ಮತ್ತು 8ರಂದು ದೀವಗಿಯ ಹಾಲಕ್ಕಿ ಒಕ್ಕಲಿಗರ ಸಮುದಾಯ ಭವನದಲ್ಲಿ ಕಾರ್ಯಕರ್ತರ ಪ್ರಾಂತ ಸಮ್ಮೇಳನ ಹಮ್ಮಿಕೊಂಡಿದ್ದೇವೆ ಎಂದು ವನವಾಸಿ ಕಲ್ಯಾಣದ ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ ತಿಳಿಸಿದರು.
ಪಟ್ಟಣದ ವನವಾಸಿ ಕಲ್ಯಾಣದ ವಸತಿ ನಿಲಯದ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು, ವನವಾಸಿ ಕಲ್ಯಾಣದ ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ ಅವರು, ವನವಾಸಿ ಕಲ್ಯಾಣ ಕರ್ನಾಟಕ ಗಿರಿಜನರ ಸರ್ವಾಂಗಿಣ ವಿಕಾಸಕ್ಕಾಗಿ ಕಾರ್ಯ ಮಾಡುತ್ತಿರುವ ಸ್ವಯಂ ಸೇವಾ ಸಂಸ್ಥೆಯಾಗಿದೆ. ವನವಾಸಿ ಜನರ ಶೈಕ್ಷಣಿಕ, ಆರೋಗ್ಯ, ಆರ್ಥಿಕ ವಿಕಾಸ, ಕ್ರೀಡೆ ಹಾಗೂ ಸಂಸ್ಕೃತಿಯ ಸಂರಕ್ಷಣೆಗಾಗಿ ಕರ್ನಾಟಕದಲ್ಲಿ ಕಳೆದ 34 ವರ್ಷಗಳಿಂದ ಅವಿರತ ಶ್ರಮಿಸುತ್ತಿದೆ. ಇದರ ಫಲವಾಗಿ ಇತ್ತೀಚೆಗೆ ಅನೇಕ ಗಿರಿಜನರು ಶಿಕ್ಷಣದಲ್ಲಿ ಜಾಗೃತೆ, ಸ್ವಾವಲಂಬನೆ ಸಾಧಿಸುತ್ತಿದ್ದಾರೆ. ಜ.7 ಮತ್ತು 8ರಂದು ನಡೆಯಲಿರುವ ಕಾರ್ಯಕರ್ತರ ಪ್ರಾಂತ ಸಮ್ಮೇಳನದಲ್ಲಿ ಕರ್ನಾಟಕದ 17 ಜಿಲ್ಲೆಗಳಿಂದ 28 ಗಿರಿಜನರ ಸಮುದಾಯದ ಪ್ರತಿನಿಧಿಗಳು ಹಾಗೂ ವನವಾಸಿ ಕಲ್ಯಾಣದ ವಿವಿಧ ಸ್ತರದ 450 ಕಾರ್ಯಕರ್ತರು ಭಾಗವಹಿಸಿ, ಗಿರಿಜನರ ಸಮುದಾಯದ ಸಮಗ್ರ ವಿಕಾಸಕ್ಕಾಗಿ ಚಿಂತನೆ, ಸಮಾಲೋಚನೆ ಮಾಡಲಿದ್ದಾರೆ ಎಂದರು.
ಪ್ರಾಂತ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಎಂ.ಟಿ.ಗೌಡ ಮಾತನಾಡಿ, ತಾಲೂಕಿನ ದೀವಗಿಯ ಹಾಲಕ್ಕಿ ಒಕ್ಕಲಿಗರ ಸಮಾಭವನದಲ್ಲಿ ಜ.7ರಂದು ಬೆಳಿಗ್ಗೆ 10.30ಕ್ಕೆ ಕಾರ್ಯಕರ್ತರ ಪ್ರಾಂತ ಸಮ್ಮೇಳನವನ್ನು ಮಿರ್ಜಾನ ಆದಿಚುಂಚನಗಿರಿ ಶಾಖಾ ಮಠದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಉದ್ಘಾಟಿಸಲಿದ್ದು, ಶಾಸಕ ದಿನಕರ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಜ.8ರಂದು ಮಧ್ಯಾಹ್ನ 2.30ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಪ್ರಾಂತ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಎಂ.ಟಿ.ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ವನವಾಸಿ ಕಲ್ಯಾಣ ಆಶ್ರಮದ ದಕ್ಷಿಣ ಮಧ್ಯಕ್ಷೇತ್ರ ಸಂಘಟನಾ ಕಾರ್ಯದರ್ಶಿ ಶ್ರೀಪಾದ ಜಿ., ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಕೆನರಾ ಹೆಲ್ತ್ಕೇರ್ ಸೆಂಟರ್ನ ಮುಖ್ಯಸ್ಥ ಡಾ.ಜಿ.ಜಿ.ಹೆಗಡೆ, ಉದ್ಯಮಿ ಎಚ್.ಆರ್.ನಾಯ್ಕ ಕೋನಳ್ಳಿ ಸೇರಿದಂತೆ ಇತರೆ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಸಹಕಾರ್ಯದರ್ಶಿ ಡಾ.ಸುರೇಶ ಹೆಗಡೆ ಮಾತನಾಡಿ, ಎರಡು ದಿನಗಳ ಕಾಲ ನಡೆಯಲಿರುವ ಪ್ರಾಂತ ಸಮ್ಮೇಳನದಲ್ಲಿ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಯಲಿದೆ. ಚಿಂತನೆ, ಸಮಾಲೋಚನೆ ನಡೆಯಲಿದೆ. ವಿವಿದ ಭಾಗಗಳಿಂದ ಆಗಮಿಸಿದ ಕಾರ್ಯಕರ್ತರಿಗೆ ಊಟೋಪಚಾರ, ವಸತಿ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಲಾಗಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಸ್ವಾಗತ ಸಮಿತಿಯ ಕಾರ್ಯದರ್ಶಿ ಗಣೇಶ ಸಿಂಗನಕುಳಿ, ಸಹ ಕಾರ್ಯದರ್ಶಿ ಡಾ.ಶ್ರೀಧರ ಗೌಡ ಉಪ್ಪಿನಗಣಪತಿ, ವನವಾಸಿ ಕಲ್ಯಾಣ ಕರ್ನಾಟಕದ ಪ್ರಮುಖರಾದ ಚಂದ್ರಶೇಖರ ನಾಯ್ಕ, ಸುಕನ್ಯಾ ಗುನಗಾ, ಶ್ರೀಧರ ಸಾಲೆಹಕ್ಕಲು ಸೇರಿದಂತೆ ಮತ್ತಿತರರು ಇದ್ದರು.