ಶಿರಸಿ: ಶಿರಸಿ ಲಯನ್ಸ್ ಕ್ಲಬ್‌ನ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಜ.5 ಗುರುವಾರದಂದು ಲಯನ್. ಎ.ಪಿ.ಸಿಂಗ್ ಶಿರಸಿಗೆ ಆಗಮಿಸಲಿದ್ದಾರೆ.
ವಿಶ್ವದಲ್ಲಿಯೇ ಅತಿ ದೊಡ್ಡ ಸೇವಾ ಸಂಸ್ಥೆಯಾಗಿರುವ ಲಯನ್ಸ್ ಅಂತರಾಷ್ಟ್ರೀಯ ಮೂರನೇ ಉಪಾಧ್ಯಕ್ಷರಾಗಿ ಭಾರತೀಯರಾದ ಲಯನ್. ಎ. ಪಿ. ಸಿಂಗ್ ಚುನಾಯಿತರಾಗಿ ಆಯ್ಕೆಯಾಗಿದ್ದಾರೆ. 2022-23 ನೇ ಸಾಲಿನ ತೃತೀಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಇವರು 2025-26 ನೇ ಸಾಲಿನ ಅಂತರಾಷ್ಟ್ರೀಯ ಅಧ್ಯಕ್ಷರಾಗಲಿದ್ದಾರೆ.
ಲಯನ್ ಎ.ಪಿ. ಸಿಂಗ್ ಮೂಲತ: ಕೋಲ್ಕತ್ತಾದವರು. ವೃತ್ತಿಯಲ್ಲಿ ತೆರಿಗೆ ಸಲಹೆದಾರರು. ಪ್ರವೃತ್ತಿಯಲ್ಲಿ ಸಮಾಜದ ವಿವಿಧ ರಂಗಗಳಲ್ಲಿ ಸೇವಾಭಾವದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 1984ರಲ್ಲಿ ಲಯನ್ಸ್ ಕ್ಲಬ್ ಸದಸ್ಯರಾಗಿ ಸೇರಿದ ಇವರು ತಮ್ಮ ಕ್ಲಬ್ಬಿನಲ್ಲಿ ವಿವಿಧ ಹುದ್ದೆಗಳಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಿದವರು. 2000-2001 ರಲ್ಲಿ ತಮ್ಮ ಮಾತೃ ಲಯನ್ ಜಿಲ್ಲೆ 322 ಬಿ ಜಿಲ್ಲೆಯ ಡಿಸ್ಟ್ರಿಕ್ಟ್ ಗವರ್ನರ್ ಹುದ್ದೆಯನ್ನು ಅಲಂಕರಿಸಿ ಸಮರ್ಥ ಡಿಸ್ಟ್ರಿಕ್ಟ್ ಗವರ್ನರ್ ಎನ್ನಿಸಿಕೊಂಡಿದ್ದಾರೆ. ಐದಾರು ಲಯನ್ ಜಿಲ್ಲೆಗಳನ್ನೊಳಗೊಂಡ ಲಯನ್ ಮಲ್ಟಿಪಲ್ ಕೌನ್ಸಿಲ್ ಚೇರ್‌ಪರ್ಸನ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. 2004 ರಿಂದ 2006 ರವರೆಗಿನ ಅವಧಿಯಲ್ಲಿ ಲಯನ್ ಅಂತರಾಷ್ಟ್ರೀಯ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ದಾರೆ.
ಲಯನ್ ಎ.ಪಿ.ಸಿಂಗ್ ಒಳ್ಳೇಯ ವಾಗ್ಮಿ ಮತ್ತು ತರಬೇತುದಾರರು. ಅಂತರಾಷ್ಟ್ರೀಯ ಮಟ್ಟದಲ್ಲಿ ಅನೇಕ ಲಯನ್ ತರಬೇತಿ ಶಿಬಿರಗಳಲ್ಲಿ ಭಾಗವಹಿಸಿ ತರಬೇತಿ ನೀಡಿದ್ದಾರೆ. ಲಯನ್ಸ್ ಸೇವಾ ಸಂಸ್ಥೆಯ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ವಿವಿಧ ಸಮಿತಿಗಳಲ್ಲಿಯೂ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸಿದ್ದಾರೆ. ಲಯನ್ಸ್ ಸೇವಾ ಸಂಸ್ಥೆಯಲ್ಲಿ ತಮ್ಮನ್ನು ತಾವು ಶೃದ್ಧೆಯಿಂದ ತೊಡಗಿಸಿಕೊಂಡು ದುಡಿದಿದ್ದಾರೆ: ತಮ್ಮ ಸೇವಾ ಸಾಮರ್ಥ್ಯದಿಂದ ಮತ್ತು ಕರ್ತತ್ವ ಶಕ್ತಿಯಿಂದ ಅನೇಕ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಲಯನ್ ಎ.ಪಿ.ಸಿಂಗ್ ರವರು ಅಂತಾರಾಷ್ಟ್ರೀಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿ ತನ್ಮೂಲಕ ಅಂತಾರಾಷ್ಟ್ರೀಯ ಅಧ್ಯಕ್ಷರಾಗಲಿರುವುದು ಭಾರತೀಯರ ಹೆಮ್ಮೆ.