ಯಲ್ಲಾಪುರ: ವಿದ್ಯಾರ್ಥಿಗಳು ನಮ್ಮ ನಡುವೆ ಇರುವ ಸಾಧಕರ ಆದರ್ಶಗಳನ್ನು ಪಾಲಿಸುವ ಮೂಲಕ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕೆಂದು ತಾಲೂಕಾ ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಕಾಶ ತಾರೀಕೊಪ್ಪ ಹೇಳಿದರು.
ಅವರು ತಾಲೂಕಿನ ನಂದೊಳ್ಳಿ ಸರ್ಕಾರಿ ಪ್ರೌಢಶಾಲೆಯ ವಾರ್ಷಿಕ ಸ್ನೇಹ ಸಮ್ಮಿಲನದಲ್ಲಿ ಭಾಗವಹಿಸಿ ಮಾತನಾಡಿದರು.
ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಆರ್.ಎಸ್.ಭಟ್ಟ ಮಾತನಾಡಿ, ಕೇವಲ ಭಾಷಣದಿಂದ ಸರ್ಕಾರಿ ಶಾಲೆಗಳ ಉಳಿವು ಸಾಧ್ಯವಿಲ್ಲ. ಸರ್ಕಾರಿ ಶಾಲೆಯಲ್ಲೇ ಮಕ್ಕಳನ್ನು ಓದಿಸಬೇಕೆಂದು ಊರಿಗೆ ಉಪದೇಶ ಮಾಡುವವರು ಮೊದಲು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು. ಪ್ರತಿಯೊಬ್ಬರೂ ಈ ಕುರಿತು ಜಾಗೃತಿ ಹೊಂದಿ, ಕಾರ್ಯರೂಪಕ್ಕೆ ತಂದಾಗ ಮಾತ್ರ ಸರ್ಕಾರಿ ಶಾಲೆಗಳು ಮುಚ್ಚದಂತೆ ತಡೆಯಲು ಸಾಧ್ಯ ಎಂದರು.
ಗ್ರಾ.ಪo ಸದಸ್ಯ ಟಿ.ಆರ್.ಹೆಗಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಸಜ್ಜನ ಸ್ನೇಹಿತರನ್ನು ಗಳಿಸಿಕೊಳ್ಳಬೇಕು. ಪಠ್ಯದ ಜತೆಗೆ ಉತ್ತಮ ನಡೆ, ನುಡಿಗಳ ಮೂಲಕ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಕೋವಿಡ್ ಸಮಯದಲ್ಲಿ ಶಾಲೆಯ ಅಭಿವೃದ್ಧಿಗೆ ಸಹಕರಿಸಿದ ಪ್ರಮುಖರನ್ನು ಗೌರವಿಸಲಾಯಿತು. ಕಳೆದ ಸಾಲಿನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ವಾರ್ಷಿಕೋತ್ಸವದ ಪ್ರಯುಕ್ತ ಏರ್ಪಡಿಸಿದ್ದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಗ್ರಾ.ಪಂ ಸದಸ್ಯೆ ನಾಗರತ್ನಾ ನಾಯ್ಕ, ಮಾಜಿ ಅಧ್ಯಕ್ಷ ಶ್ರೀಧರ ಗುಮ್ಮಾನಿ, ಮಾಜಿ ಉಪಾಧ್ಯಕ್ಷ ಎಂ.ಎನ್.ಭಟ್ಟ, ಮಾಜಿ ಸದಸ್ಯ ಟಿ.ವಿ.ಭಾಗ್ವತ, ಹಿರಿಯರಾದ ಟಿ.ಕೆ.ಭಾಗ್ವತ, ಎಸ್.ಡಿ.ಎಂ.ಸಿ ಅಧ್ಯಕ್ಷ ಬಾಲಚಂದ್ರ ಭಟ್ಟ, ಉಪಾಧ್ಯಕ್ಷೆ ರಾಜೇಶ್ವರಿ ಭಟ್ಟ, ಪತ್ರಕರ್ತ ಶ್ರೀಧರ ಅಣಲಗಾರ, ಮುಖ್ಯಾಧ್ಯಾಪಕಿ ಗೀತಾ ಹೆಗಡೆ ಇತರರಿದ್ದರು. ಶಿಕ್ಷಕರಾದ ನಿತೀಶ ತೊರ್ಕೆ, ವೆಂಕಟ್ರಮಣ ಭಟ್ಟ, ದಾಮೋದರ ಗೌಡ, ಸುನಂದಾ ಹೆಗಡೆ, ಮಂಗಳಗೌರಿ ನಾಯಕ ನಿರ್ವಹಿಸಿದರು. ನಂತರ ವಿದ್ಯಾರ್ಥಿಗಳಿಂದ ನರಸಿಂಹ ಭಟ್ಟ ಕುಂಕಿಮನೆ ಅವರ ನಿರ್ದೇಶನದಲ್ಲಿ ‘ವಾಲಿ ವಧೆ’ ತಾಳಮದ್ದಲೆ ನಡೆಯಿತು.