ಕಾರವಾರ: ಹತ್ತು ದಿನಗಳಲ್ಲಿ ಮುಡಗೇರಿಯಲ್ಲಿ ಕೈಗಾರಿಕೆಗಾಗಿ ವಶಪಡಿಸಿಕೊಂಡ ಭೂಮಿಗೆ 50 ಲಕ್ಷ ಪರಿಹಾರ ಕೊಡಿಸಲಾಗುವುದು ಎಂದು ಶಾಸಕರು ಹೇಳಿದ್ದರು. ಆದರೆ ಹತ್ತು ದಿನ ಕಳೆದು ತಿಂಗಳು ದಾಟಿದ್ದರು ಇನ್ನು ಪರಿಹಾರ ಬಂದಿಲ್ಲ ಎಂದು ಮಾಜಿ ಶಾಸಕ ಸತೀಶ್ ಸೈಲ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ ಜಿಲ್ಲಾಧಿಕಾರಿಗಳ ಬಳಿ ಮುಡಗೇರಿ ಭೂಸ್ವಾಧೀನ ಪ್ರಕ್ರಿಯೆ ಪರಿಹಾರ ಸಂಬಂಧ ಚರ್ಚೆ ನಡೆಸಿದ ಸತೀಶ್ ಸೈಲ್ ನಂತರ ಧಾರವಾಡದ ಕೆಐಎಡಿಬಿ ಭೂ ಸ್ವಾಧೀನಾಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ಪಡೆದರು. ಎಕರೆಗೆ 40 ಲಕ್ಷ ಪರಿಹಾರ ಕೊಡಲು ಬೋರ್ಡ್ ಸಭೆಯಲ್ಲಿ ನಿಗದಿಯಾಗಿದೆ ಎಂದು ಭೂ ಸ್ವಾಧೀನಾಧಿಕಾರಿ ಮಾಹಿತಿ ನೀಡಿದ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಸತೀಶ್ ಸೈಲ್, ಎಕರೆಗೆ 50 ಲಕ್ಷ ಕೊಡುವುದಾಗಿ ಶಾಸಕರು ತಿಳಿಸಿದ್ದರು. ಆದರೆ ಸದ್ಯ 40 ಲಕ್ಷ ಎನ್ನಲಾಗುತ್ತಿದ್ದು, ಅದು ಯಾವಾಗ ಬರುತ್ತದೆ ಎಂದು ಶಾಸಕರು ಸ್ಪಷ್ಟಪಡಿಸುವಂತೆ ತಿಳಿಸಿದರು.
ಮುಡಗೇರಿಯಲ್ಲಿ ಸಭೆ ನಡೆಸಿದ ಶಾಸಕರು ಹತ್ತೇ ದಿನದಲ್ಲಿ ಪರಿಹಾರ ಕೊಡುವುದಾಗಿ ತಿಳಿಸಿದ್ದರು. ಆದರೆ ಇಂದಿಗೂ ಪರಿಹಾರ ಬಂದಿಲ್ಲ. ನಮ್ಮ ಬಳಿ ಜನ ಬಂದು ಕೇಳುತ್ತಿದ್ದಾರೆ. ಸದ್ಯ 73 ಎಕರೆಗೆ ಮಾತ್ರ ಪರಿಹಾರ ಕೊಡಲಾಗುವುದು ಎಂದು ತಿಳಿಸುತ್ತಿದ್ದಾರೆ. ಆದರೆ ಭೂ ಸ್ವಾಧೀನ ಪಡಿಸಿಕೊಂಡ 250 ಎಕರೆ ಜಮೀನಿಗೂ ಪರಿಹಾರ ಕೊಡಬೇಕು ಎಂದು ಸತೀಶ್ ಸೈಲ್ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಜಿ.ಪಿ.ನಾಯಕ, ಶಂಭು ಶೆಟ್ಟಿ, ಮಾಧವ ನಾಯಕ, ವಿಶ್ವನಾಥ್ ಕಾಲ್ಗುಟಕರ್, ಸಂದೀಪ್ ಕಲ್ಗುಟಕರ್, ಅಜಯ್ ಸಿಗ್ಲಿ ಸೇರಿದಂತೆ ಹಲವರು ಇದ್ದರು.