ಹಳಿಯಾಳ: ಕೆಎಲ್ಎಸ್ ವಿಡಿಐಟಿ ವಿದ್ಯಾರ್ಥಿನಿಯರಾದ ವೀಣಾ ಸಿದ್ನಾಳ್ ಮತ್ತು ಭುವನೇಶ್ವರಿ ಕೆ.ಎನ್. ರಾಷ್ಟ್ರಮಟ್ಟದ ಅಂತರ್ ವಿಶ್ವವಿದ್ಯಾಲಯದ ಜುಡೋ ಮತ್ತು ಕುಸ್ತಿ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಮಹಾರಾಷ್ಟ್ರದ ಪುಣೆಯಲ್ಲಿರುವ ಸಾವಿತ್ರಿಬಾಯಿ ಪುಲೆ ವಿಶ್ವವಿದ್ಯಾಲಯದಲ್ಲಿ 2023ರ ಜನವರಿ 6ರಿಂದ 9ರವರೆಗೆ ಜರುಗಲಿರುವ ಕುಸ್ತಿ ಪಂದ್ಯಾವಳಿಯಲ್ಲಿ ಭುವನೇಶ್ವರಿ ಕೆ.ಎನ್.ವಿತಾವಿ ಬೆಳಗಾವಿಯನ್ನು ಪ್ರತಿನಿಧಿಸಲಿದ್ದಾಳೆ. ಪಂಜಾಬಿನ ಪಗವಾರಾದಲ್ಲಿರುವ ಲವ್ಲೀ ಪ್ರೊಫೆಶನಲ್ ವಿಶ್ವವಿದ್ಯಾಲಯದಲ್ಲಿ 2023ರ ಜ.8ರಿಂದ 12ರವರೆಗೆ ಜರುಗಲಿರುವ ಜುಡೋ ಪಂದ್ಯಾವಳಿಯಲ್ಲಿ ವೀಣಾ ಸಿದ್ನಾಳ್ ವಿತಾವಿ ಬೆಳಗಾವಿಯನ್ನು ಪ್ರತಿನಿಧಿಸಲಿದ್ದಾಳೆ.
ರಾಷ್ಟ್ರಮಟ್ಟದ ಸ್ಪರ್ಧೆಗೆ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಆಯ್ಕೆಯಾಗಿರುವುದು ಸಂತಸದ ವಿಷಯ ಹಾಗೂ ಇವರ ಕಠಿಣ ಪರಿಶ್ರಮ ಶ್ಲಾಘನೀಯ ಎಂದು ಆಡಳಿತ ಮಂಡಳಿಯ ಅಧ್ಯಕ್ಷ ವಿನಾಯಕ ಲೋಕೂರ್ ಹೇಳಿದ್ದಾರೆ. ಸ್ಪರ್ಧೆಯಲ್ಲಿ ವಿಜಯಶಾಲಿಯಾಗಿ ಮಹಾವಿದ್ಯಾಲಯ ಹಾಗೂ ವಿಶ್ವವಿದ್ಯಾಲಯಕ್ಕೆ ಕೀರ್ತಿ ತರಲಿ ಎಂದು ಪ್ರಾಚಾರ್ಯ ಡಾ.ವಿ.ಎ.ಕುಲಕರ್ಣಿ, ದೈಹಿಕ ಶಿಕ್ಷಣ ನಿರ್ದೇಶಕ ಗದಿಗಪ್ಪ ಯಳ್ಳೂರ್ ಮತ್ತು ಎಲ್ಲಾ ಬೋಧಕ- ಬೋಧಕೇತರ ಸಿಬ್ಬಂದಿಗಳು ಶುಭ ಹಾರೈಸಿದ್ದಾರೆ.