ಸಿದ್ದಾಪುರ: ಅಕ್ಷರ ಕಲಿಕೆಯಿಂದ ನಮ್ಮೊಳಗಿನ ರಾಕ್ಷಸಿ ಸ್ವರೂಪ ಕಡಿಮೆಯಾಗಿ ಮಾನವೀಯತೆ ಬೆಳೆದು ಬರುವಂತಾಗಬೇಕು. ಶಿಕ್ಷಣವೆನ್ನುವುದು ಕೇವಲ ಅಂಕಗಳಿಕೆಯ ಮಾನದಂಡವಾಗದೆ ಮನುಷ್ಯ ಸಹಜವಾದ ಪ್ರೀತಿ, ಪ್ರೇಮ, ವಿಶ್ವಾಸ ಮಾನವತೆಯ ಉನ್ನತ ಮೌಲ್ಯಗಳನ್ನು ಸೃಷ್ಟಿಸುವಂತಾದರೆ ಅಕ್ಷರ ಕಲಿಕೆ ಸಾರ್ಥಕವಾಗುತ್ತದೆ ಎಂದು ನಿವೃತ್ತ ಮುಖ್ಯ ಶಿಕ್ಷಕ ಹಾಗೂ ಸಾಹಿತಿ ಜಿ.ಜಿ.ಹೆಗಡೆ ಬಾಳಗೋಡ ಹೇಳಿದರು.
ಅವರು ಶಿಕ್ಷಣ ಪ್ರಸಾರಕ ಸಮಿತಿಯ ಅಕ್ಷರ ಜಾತ್ರೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ವಿದ್ಯಾಭ್ಯಾಸದಿಂದ ವ್ಯಕ್ತಿತ್ವ ವಿಕಸನ ಸಾಮಾಜಿಕ ಔನ್ನತ್ಯ ಹಾಗೂ ಉತ್ತಮ ಚರಿತ್ರೆಯ ನಿರ್ಮಾಣ ಆಗುವಂತಾದರೆ ವಿದ್ಯಾಸಂಸ್ಥೆಗಳನ್ನು ಕಟ್ಟಿದವರಿಗೆ ಅತಿ ಹೆಚ್ಚಿನ ಸಂತೋಷವಾಗುತ್ತದೆ. ಅಲ್ಲದೇ ಸಂಸ್ಥೆ ಕಟ್ಟಿದ ಬಗ್ಗೆ ಸಹಜವಾದ ಸಮಾಧಾನವಾಗುತ್ತದೆ. ವಿದ್ಯೆ ನಮ್ಮ ಬದುಕನ್ನು ಬೆಳಸಬೇಕು ಅದನ್ನು ಸ್ವಾರ್ಥಕ್ಕೆ ಬಳಸಿಕೊಂಡರೆ ನಾವು ದುಃಖಿಗಳಾಗುತ್ತೇವೆ. ಸುಂದರ ಸಮಾಜ ನಿರ್ಮಾಣದ ಗುರಿ ನಮ್ಮೆಲ್ಲರದಾಗಿರಬೇಕು. ಸಾಕ್ಷರರು ಮನುಷ್ಯತ್ವವನ್ನು ಗೌರವಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆಯನ್ನು ಶಿಕ್ಷಣ ಪ್ರಸಾರಕ ಸಮಿತಿಯ ನಿರ್ದೇಶಕ ಜಿ.ಕೆ.ಹೆಗಡೆ ಗೋಳಗೋಡ ಅವರು ವಹಿಸಿ ಮಾತನಾಡಿ, ಗಣೇಶ ಹೆಗಡೆ ದೊಡ್ಮನೆ ಅವರು ಉತ್ತಮ ಆಶಯದೊಂದಿಗೆ ಶಿಕ್ಷಣ ಪ್ರಸಾರಕ ಸಮಿತಿಯನ್ನು ಕಟ್ಟಿ ಬೆಳೆಸಿದ್ದು, ಈ ಬಾರಿ ಅವರ ಶತಮಾನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ. ಅವರು ಪ್ರಾಥಮಿಕ ಶಿಕ್ಷಣದಿಂದ ಪದವಿ ಶಿಕ್ಷಣದವರೆಗೆ ಹಾಗೂ ಆಯುರ್ವೇದ ಮಹಾವಿದ್ಯಾಲಯ ಮುಂತಾದ ಶಿಕ್ಷಣ ಸಂಸ್ಥೆಗಳನ್ನು ನಡೆಸಿ ಅನೇಕರ ಬಾಳಿಗೆ ಬೆಳಕಾಗಿದ್ದಾರೆ. ಶಿಕ್ಷಣ ನಮ್ಮ ಅಂತರoಗದ ಸತ್ವವನ್ನು ಬೆಳೆಸುತ್ತದೆ ತನ್ಮೂಲಕ ಸಮಾಜ ಅಭಿವೃದ್ಧಿ ಹೊಂದುತ್ತದೆ ಎಂದು ಹೇಳಿದರು.
ಶಿಕ್ಷಣ ಪ್ರಸಾರಕ ಸಮಿತಿಯ ಅಧ್ಯಕ್ಷ ವಿನಾಯಕರಾವ್ ಜಿ.ಹೆಗಡೆ, ಕಾರ್ಯದರ್ಶಿ ಕೆ.ಐ.ಹೆಗಡೆ ತಾರಗೋಡ, ಎನ್.ವಿ. ಹೆಗಡೆ ಸಣ್ಮನೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನಿವೃತ್ತರಾಗಿರುವ ಪ್ರೊ.ಡಿ.ಐ.ಫರ್ನಾಕರ, ಎಂ.ಜಿ.ಸಿ. ಮಹಾವಿದ್ಯಾಲಯ, ಡಿ.ಬಿ.ನಾಯ್ಕ ಸಿದ್ಧಿವಿನಾಯಕ ಪ್ರೌಢಶಾಲೆ, ಕೆ.ಪಿ.ಹೆಗಡೆ ಎಂ.ಜಿ.ಸಿ. ಮಹಾವಿದ್ಯಾಲಯ, ಶಾರದಾ ಹೆಗಡೆ ಸಿದ್ದಿವಿನಾಯಕ ಬಾಲಕರ ಪ್ರೌಢಶಾಲೆ, ಡಿ.ಕೆ. ಛಲವಾದಿ ಎಂ.ಜಿ.ಸಿ. ಮಹಾವಿದ್ಯಾಲಯ, ಮಂಜುನಾಥ ಹರಿಜನ ಎಂ.ಜಿ.ಸಿ. ಮಹಾವಿದ್ಯಾಲಯ, ಅವರುಗಳನ್ನು ಸನ್ಮಾನಿಸಲಾಯಿತು.
ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಗರಿಷ್ಠ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ಭಾರ್ಗವ ಜಿ.ಎ. ಅಜಿತಕುಮಾರ ಎನ್. ಬಿ.ಕೆ. ವರ್ಷಾ, ಧಾತ್ರಿ ಎಮ್. ಹಿರೇಕೋಡ್, ಹಾಗೂ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಪ್ರತಿಶತ 100 ಸಾಧಿಸಿದ ಶಾಲೆಗಳ ಮುಖ್ಯಾಧ್ಯಾಪಕರುಗಳಿಗೆ ಅಧ್ಯಕ್ಷರ ನಗದು ಪ್ರೋತ್ಸಾಹ, ಡಿ.ಜಿ. ಪೂಜಾರ್, ಆರ್.ವಿ. ಪ್ರೌಢಶಾಲೆ ಇಟಗಿ, ಸಂತೋಷ ಹೆಗಡೆ ಸಿದ್ಧಿವಿನಾಯಕ ಆಂಗ್ಲಮಾಧ್ಯಮ ಪ್ರೌಢಶಾಲೆ ಸಿದ್ದಾಪುರ ಇವರನ್ನು ಸನ್ಮಾನಿಸಿದರು.
ಸಂಗೀತ ಶಿಕ್ಷಕ ಶ್ರೀಪಾದ ಹೆಗಡೆ ಹಾಗೂ ಭಾಸ್ಕರ ಹೆಗಡೆ ಸಂಯೋಜನೆಯಲ್ಲಿ ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿದರು. ಶಿಕ್ಷಣ ಪ್ರಸಾರಕ ಸಮಿತಿಯ ಕಾರ್ಯಾಧ್ಯಕ್ಷ ಡಾ. ಶಶಿಭೂಷಣ ವಿ.ಹೆಗಡೆ ದೊಡ್ಮನೆ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನ್ನಾಡುತ್ತಾ ಅಕ್ಷರಜಾತ್ರೆಯ ಉದ್ದೇಶವನ್ನು ವಿವರಿಸಿದರು. ಈ ಸಂದರ್ಭದಲ್ಲಿ ಪ್ರತಿಭೆಗಳನ್ನು ಗೌರವಿಸುವುದು, ಉತ್ತಮ ಸಾಧನೆ ಮಾಡಿದ ಶಾಲೆಗಳನ್ನು ಗೌರವಿಸುವುದು ಒಂದು ಮಹತ್ವದ ಉದ್ದೇಶವಾಗಿದೆ ಎಂದು ಹೇಳಿದರು. ನಿರ್ದೇಶಕ ಎಂ.ಎಲ್. ಭಟ್ ಉಂಚಳ್ಳಿ ವಂದಿಸಿದರು.