ಕಾರವಾರ: ನಗರದ ಮಾರುತಿಗಲ್ಲಿಯ ಮಾರುತಿ ಮಂದಿರದ ಜಾತ್ರೆಯು ವಿಜೃಂಭಣೆಯಿಂದ ಸಮಾರೋಪಗೊಂಡಿತು. ಜಾತ್ರೆಯ ಅಂಗಳ ತುಂಬಾ ತುಂಬಿದ್ದ ರಂಗೋಲಿಗಳು ಎಲ್ಲರ ಗಮನ ಸೆಳೆದವು.
ಜಾತ್ರೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷ ಸಹ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು, ಗಂಧದ ಗುಡಿಯ ಪೋಸ್ಟರ್, ಪುನೀತ್ ರಾಜಕುಮಾರ್, ಕಾಂತಾರ ಚಿತ್ರದಲ್ಲಿನ ಪಂಜುರ್ಲಿ ದೈವ, ಪುಷ್ಪ ಚಿತ್ರದಲ್ಲಿನ ಅಲ್ಲು ಅರ್ಜುನ್ ಸೇರಿದಂತೆ ಬಣ್ಣ ಬಣ್ಣದ ರಂಗೋಲಿಯಲ್ಲಿ ಮೂಡಿದ ಅನೇಕ ಚಿತ್ತಾರಗಳು ನೋಡುಗರ ಕಣ್ಮನ ಸೆಳೆದವು. ಸ್ನಾನ ಮಾಡುವ ಬಾಲಕ, ಬೆಕ್ಕನ್ನು ಹಿಡಿದುಕೊಂಡಿರುವ ಅಜ್ಜಿ, ಹರಿದ ಪುಸ್ತಕ ನೋಡುತ್ತಿರುವ ಅಜ್ಜಿ ಹೀಗೆ ಮುಂತಾದ ರಂಗೋಲಿಗಳು ಜನಾಕರ್ಷಿಸಿದವು. ಪ್ರತಿ ವರ್ಷದಂತೆ ನೂರಾರು ಮಂದಿ ಜಾತ್ರೆ ಪ್ರಯುಕ್ತ ತಮ್ಮ ತಮ್ಮ ಮನೆಯ ಮುಂದೆ ರಂಗೋಲಿಗಳನ್ನ ಬಿಡಿಸಿ ಪ್ರದರ್ಶನಕ್ಕೆ ಇಡುವ ಮೂಲಕ ಜನರ ಮೆಚ್ಚುಗೆ ಗಳಿಸಿದರು.
ಇಷ್ಟೇ ಅಲ್ಲದೇ, ಚುಕ್ಕಿ ರಂಗೋಲಿ, ಹೂವಿನಿಂದ ಹಾಕಿದ ರಂಗೋಲಿ ಹಾಗೂ ವಿವಿಧ ಧಾನ್ಯಗಳಿಂದ ಸಹ ರಂಗೋಲಿ ಬಿಡಿಸಿ ಪ್ರದರ್ಶಿಸಲಾಯಿತು. ಮಾರುತಿ ಜಾತ್ರೆಯಲ್ಲಿ ರಂಗೋಲಿಗಳೇ ಆಕರ್ಷಣೆ ಆಗಿರುವುದರಿಂದ ಕೇವಲ ಕಾರವಾರದಿಂದ ಮಾತ್ರವಲ್ಲದೇ ಗೋವಾ, ಮಹಾರಾಷ್ಟ್ರ, ಮುಂಬೈಯಿಂದ ಸಹ ಜನರು ಆಗಮಿಸಿ ರಂಗೋಲಿಗಳನ್ನು ನೋಡಿ ಖುಷಿಪಟ್ಟರು. ಅನೇಕರು ತಮ್ಮ ತಮ್ಮ ಮೊಬೈಲ್‌ಗಳಲ್ಲಿ ಸಹ ರಂಗೋಲಿಗಳ ಫೊಟೋಗಳನ್ನ ಸೆರೆಹಿಡಿಯೋ ಮೂಲಕ ಸಂತಸಪಟ್ಟರು.
ಮಾರುತಿ ದೇವರ ಜಾತ್ರೆಯಲ್ಲಿ ಬೆಳಗಿನ ಜಾವದ ತನಕ ಜನರು ರಂಗೋಲಿಯ ಪ್ರದರ್ಶನ ಮಾಡಿದರು. ಸಾವಿರಾರು ಜನರು ಬೆಳಿಗ್ಗೆಯಾದರೂ ಆಕರ್ಷಕ ರಂಗೋಲಿ ನೋಡಲು ಆಗಮಿಸಿದರು. ಜಾತ್ರೆಯ ಸಂಘಟಕರು ಪ್ರಸಿದ್ದ ವ್ಯಕ್ತಿಗಳ ಭಾವಚಿತ್ರಕ್ಕೆ, ಚುಕ್ಕಿ ರಂಗೋಲಿ, ಧಾನ್ಯದ ರಂಗೋಲಿ ಹಾಗೂ ಹೂವಿನ ರಂಗೋಲಿಗೆ ಪ್ರತ್ಯೇಕವಾಗಿ ಬಹುಮಾನ ನೀಡಿದರು. ಅಲ್ಲದೇ ಸ್ಪರ್ಧೆಯಲ್ಲಿ ಪಾಲ್ಗೊಂಡ ಪ್ರತಿ ಸ್ಪರ್ಧಾಳುಗಳಿಗೂ ಸಮಾಧಾನಕರ ಬಹುಮಾನ ನೀಡಲಾಯಿತು.