ಕಾರವಾರ: ಮಾಜಿ ಶಾಸಕ ಸತೀಶ್ ಸೈಲ್ ಅವರು ಗುರುವಾರ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ, ಗಂಭೀರ ಪರಿಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನ ಭೇಟಿಯಾಗಿ ಆರೋಗ್ಯ ಸ್ಥಿತಿ ವಿಚಾರಿಸಿದರು. ಈ ವೇಳೆ ವೈದ್ಯರುಗಳಿಗೆ ಉತ್ತಮ ಚಿಕಿತ್ಸೆ ನೀಡಲು ಸೂಚಿಸಿದ್ದಲ್ಲದೆ, ರೋಗಿಗಳ ಕುಟುಂಬಸ್ಥರಿಗೂ ಧೈರ್ಯ ತುಂಬುವ ಕಾರ್ಯ ಮಾಡಿದರು.
ಜಿಲ್ಲಾ ಆಸ್ಪತ್ರೆಯ ತುಂಬೆಲ್ಲಾ ಓಡಾಡಿ ಚಿಕಿತ್ಸೆಗೆ ಬಂದವರಿoದ ಆಸ್ಪತ್ರೆಯ ಕುಂದು- ಕೊರತೆ ಕುರಿತು ಮಾಹಿತಿ ಪಡೆದರು. ಅಲ್ಲದೇ ಆಸ್ಪತ್ರೆಯ ವೈದ್ಯರಿಂದ ಸಿಗುವ ಉತ್ತಮ ವೈದ್ಯಕೀಯ ಸೇವೆಗಳ ಬಗ್ಗೆ ರೋಗಿಗಳಿಗೂ ತಿಳಿಸಿ ಅವರಲ್ಲೂ ಭರವಸೆ ಮೂಡಿಸುವ ಕಾರ್ಯ ಮಾಡಿದರು. ಈ ಭೇಟಿಯ ವೇಳೆ ಮಹಿಳೆಯೊಬ್ಬರು, ಗಂಭೀರ ಪರಿಸ್ಥಿತಿಯಲ್ಲಿರುವ ತನ್ನ ಒಂದು ತಿಂಗಳ ಮಗುವನ್ನು ದಾಖಲಿಸಿರುವುದಾಗಿಯೂ, ಮಗುವಿನ ಆರೋಗ್ಯ ಸ್ಥಿತಿಯ ಕುರಿತು ವಿಚಾರಿಸುವಂತೆಯೂ ಸೈಲ್ ಅವರ ಬಳಿ ಕಣ್ಣೀರು ಹಾಕುತ್ತಾ ವಿನಮ್ರವಾಗಿ ಕೇಳಿಕೊಂಡರು. ಈ ವೇಳೆ ಜೊತೆಗಿದ್ದ ಆರ್‌ಎಂಒ ಡಾ.ವೆಂಕಟೇಶ ಅವರ ಬಳಿ ಮಗುವಿನ ಆರೋಗ್ಯ ಸ್ಥಿತಿಯ ಮಾಹಿತಿ ಕೇಳಿದಾಗ, ತಾಯಿಗೆ ತಿಂಗಳು ತುಂಬುವ ಮುನ್ನವೇ ಹೆರಿಗೆ ನೋವುಂಟಾಗಿತ್ತು. ಡೆಲಿವರಿ ಮಾಡದಿದ್ದರೆ ತಾಯಿ, ಮಗು ಇಬ್ಬರ ಜೀವಕ್ಕೂ ಅಪಾಯವಿತ್ತು. ತಾಯಿಗಾಗಿ ಡೆಲಿವರಿ ಮಾಡಿಸಲಾಗಿದ್ದು, ಮಗುವಿನ ತೂಕದಲ್ಲಿ ಕಡಿಮೆ ಇದೆ. ಹೀಗಾಗಿ ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿಸಿದರು. ಇಲ್ಲಿನ ವೈದ್ಯರುಗಳು ಉತ್ತಮವಾಗಿದ್ದು, ಸದ್ಯ ಇಲ್ಲಿಯೇ ಚಿಕಿತ್ಸೆ ಮುಂದುವರಿಯಲಿ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ತಮಗೆ ಮಾಹಿತಿ ನೀಡುವಂತೆ ಸೈಲ್ ತಿಳಿಸಿದರು.
ಇನ್ನು ಕಿವಿಯ ಹಿಂಬದಿಯಲ್ಲಿ ಚಿಕ್ಕ ಗುಳ್ಳೆಯಾಗಿ ಮುಖದ ತುಂಬೆಲ್ಲ ಆವರಿಸಿಕೊಂಡು ಸಾವು- ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಬಾಲಕನನ್ನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವಾರ್ಡ್ಗೆ ಭೇಟಿ ನೀಡಿ ಸದ್ಯದ ಆರೋಗ್ಯ ಸ್ಥಿತಿಯ ಬಗ್ಗೆ ಆರ್‌ಎಂಒ ಡಾ.ವೆಂಕಟೇಶ್ ಹಾಗೂ ಇತರ ಕರ್ತವ್ಯನಿರತ ವೈದ್ಯಕೀಯ ತಂಡಗಳಿoದ ಸೈಲ್ ಮಾಹಿತಿ ಪಡೆದಕೊಂಡರು. ಈ ವೇಳೆ ಜೊತೆಗಿದ್ದ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಬಾಲಕನ ಕುಟುಂಬದ ಪರಿಸ್ಥಿತಿ ಹಾಗೂ ಇನ್ನಿತರ ಮಾಹಿತಿಗಳನ್ನ ನೀಡಿದರು. ಬಾಲಕನಿಗೆ ವೈದ್ಯರುಗಳು ಕಾಳಜಿ ವಹಿಸಿ ಚಿಕಿತ್ಸೆ ನೀಡಬೇಕು. ಆರ್ಥಿಕ ಸಮಸ್ಯೆಯ ಬಗ್ಗೆ ಕುಟುಂಬಕ್ಕೆ ಚಿಂತೆ ಬೇಡ. ಬಾಲಕನ ಚಿಕಿತ್ಸೆಗೆ ಈ ಹಿಂದೆಯೂ ನೆರವು ನೀಡಿದ್ದು, ಹೆಚ್ಚಿನ ಚಿಕಿತ್ಸೆಗೆ ಅಗತ್ಯ ನೆರವು ನೀಡಲು ನಾನು ಸಿದ್ಧನಿದ್ದೇನೆ ಎಂದು ಈ ವೇಳೆ ಭರವಸೆ ನೀಡಿದರು.
ತಾಲೂಕಿನ ಬಾಳ್ನಿಯಲ್ಲಿ ಉಂಟಾದ ಅಪಘಾತದಲ್ಲಿ ಗಾಯಗೊಂಡವರನ್ನು ತುರ್ತು ಚಿಕಿತ್ಸಾ ಘಟಕದಲ್ಲಿ ಭೇಟಿಯಾದ ಸೈಲ್, ವೈದ್ಯರುಗಳಿಂದ ಗಾಯಾಳುಗಳ ಆರೋಗ್ಯ ಸ್ಥಿತಿಯ ಮಾಹಿತಿ ಪಡೆದುಕೊಂಡರು. ನಂತರ ಗಾಯಾಳುಗಳ ಕುಟುಂಬಸ್ಥರೊoದಿಗೆ ಮಾತುಕತೆ ನಡೆಸಿದರು. ಅಪಘಾತದಲ್ಲಿ ಮೃತಪಟ್ಟ ಯುವಕನ ಮೃತದೇಹವನ್ನ ಶವಾಗಾರದಲ್ಲಿ ಕಂಡು, ಸಂತಾಪ ವ್ಯಕ್ತಪಡಿಸಿದರು. ಈ ವೇಳೆ ಯುವಕನ ಸಂಬoಧಿಗಳಿಗೆ ಸಾಂತ್ವನ ಹೇಳುವ ಕಾರ್ಯ ಮಾಡಿದರು.