ಕಾರವಾರ: ಉಪನ್ಯಾಸಕರ ವರ್ಗಾವಣೆ ಆದೇಶ ರದ್ದುಪಡಿಸುವಂತೆ ನಗರದ ಕಲಾ ಮತ್ತು ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ಕಾಲೇಜಿನ ಎದುರು ಸೇರಿದ ವಿದ್ಯಾರ್ಥಿಗಳು, ಯಾವುದೇ ಕಾರಣಕ್ಕೂ ಕಾಲೇಜಿನ ಉಪನ್ಯಾಸಕರುಗಳನ್ನ ವರ್ಗಾವಣೆಗೊಳಿಸಿದಂತೆ ಆಗ್ರಹಿಸಿದರು. ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಹಾಗೂ ಅಸೋಸಿಯೇಟ್ ಎನ್ಸಿಸಿ ಆಫೀಸರ್ ಕೂಡ ಆಗಿರುವ ಡಾ.ಅಂಜಲಿ ರಾಣೆ ಮತ್ತು ಉಪನ್ಯಾಸಕ ಮೋಹನ್ ಎನ್ನುವವರನ್ನು ವರ್ಗಾವಣೆಗೊಳಿಸಿ ಕೌನ್ಸೆಲಿಂಗ್ ಪಟ್ಟಿ ಬಿಡುಗಡೆ ಮಾಡಲಾಗಿದೆ. ಇದರಿಂದಾಗಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಕಲಿಕೆಗೆ ತೊಂದರೆಯಾಗಲಿದೆ. ಒಂದುವೇಳೆ ವಿದ್ಯಾರ್ಥಿಗಳ ವಿರೋಧದ ನಡುವೆಯೂ ವರ್ಗಾವಣೆಗೊಳಿಸಿದ್ದಲ್ಲಿ ಮತ್ತೆ ಪ್ರತಿಭಟನೆ ನಡೆಸಲಿದ್ದೇವೆ ಎಂದು ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದ್ದಾರೆ.
ಇನ್ನು ಕಾಲೇಜಿನಲ್ಲಿ ಕಾಯಂ ಉಪನ್ಯಾಸಕರ ಕೊರತೆ ಇದ್ದು, ಇದೀಗ ಇರುವ ಕೆಲವೇ ಕೆಲವು ಉಪನ್ಯಾಸಕರುಗಳನ್ನೂ ವರ್ಗಾವಣೆಗೊಳಿಸಿದರೆ ಕಾಲೇಜಿಗೆ ಸೇರುವ ವಿದ್ಯಾರ್ಥಿಗಳಿಗೆ ಪಾಠ ಮಾಡುವವರು ಯಾರು? ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹಿನ್ನಡೆಯಾಗುವಂಥ ಆದೇಶವನ್ನ ಸರ್ಕಾರ ಹಿಂತೆಗೆದುಕೊಳ್ಳಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.