ಕುಮಟಾ: ಎಲ್ಲ ಮಹಾನ್ ಸಾಧಕರು ತಮ್ಮ ಜೀವನದಲ್ಲಿ ಕಠಿಣ ಪರಿಶ್ರಮ ಹಾಗೂ ತ್ಯಾಗದ ಮೂಲಕ ಜೀವನದಲ್ಲಿ ಸಾಧನೆ ಮಾಡಿದ್ದಾರೆ. ಅಂಥವರ ಬದುಕು ನಿಮಗೆ ಮಾದರಿಯಾಗಬೇಕು ಎಂದು ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಜುಬೀನ್ ಮಹೋಪಾತ್ರ ವಿದ್ಯಾರ್ಥಿಗಳಿಗೆ ತಿಳಿಹೇಳಿದರು.
ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜರುಗಿದ ಸೈನಿಕ ಹುದ್ದೆಗೆ ಆಯ್ಕೆಯಾದ ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ವಿದ್ಯಾರ್ಥಿಗಳು ಕಠಿಣ ಪರಿಶ್ರಮಿಗಳಾಗಿರಬೇಕು. ಹಣಗಳಿಸುವುದೊಂದೇ ಜೀವನದ ಗುರಿಯಾಗಬಾರದು. ಸಾಮಾಜಿಕ ಕಾಳಜಿ ಹಾಗೂ ಸಕಲ ಜೀವಿಗಳನು ಪ್ರೀತಿಸುವ ಮನೋಭಾವ ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು.
ಅಗ್ನಿಪಥ್ ಮೂಲಕ ಆಯ್ಕೆಯಾದ ಒಂಭತ್ತು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯೆ ವಿಜಯಾ ನಾಯ್ಕ, ಸೈನಿಕರ ತ್ಯಾಗದಿಂದ ನಾವಿಂದು ಸುರಕ್ಷಿತವಾಗಿದ್ದೇವೆ. ವಿದ್ಯಾರ್ಥಿಗಳು ದೇಶಸೇವೆಯತ್ತ ಮುಖಮಾಡಬೇಕು ಎಂದು ತಿಳಿಸಿದರು.
ಜಾಯ್ನ್ ಆರ್ಮಿ ಸಂಸ್ಥೆಯ ನವೀನ್ ನಾಯ್ಕ ಸೈನಿಕರಾಗಿ ಆಯ್ಕೆಯಾದ ವಿದ್ಯಾರ್ಥಿಗಳ ಪರಿಶ್ರಮ, ಆಯ್ಕೆ ಪ್ರಕ್ರಿಯೆಯ ಕುರಿತು ಸಾಕ್ಷ್ಯಚಿತ್ರ ದೊಂದಿಗೆ ವಿದ್ಯಾರ್ಥಿಗಳಿಗೆ ವಿವರಿಸಿದರು. ಆಯ್ಕೆಯಾದ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜಾಯ್ನ್ ಆರ್ಮಿಯ ತರಬೇತುದಾರರಾದ ರಾಜೇಶ್ ನಾಯ್ಕ, ಗಣೇಶ್ ನಾಯ್ಕ, ಮಾರುತಿ ನಾಯ್ಕ ಹಾಗೂ ಅಧ್ಯಾಪಕಿ ಡಾ.ಗೀತಾ ನಾಯಕ, ಡಾ.ರಜನಿ ಕರ್ಕೆರಾ ಭಾಗವಹಿಸಿದ್ದರು.