ಹಳಿಯಾಳ: ಕೆಎಲ್‌ಎಸ್ ವಿಡಿಐಟಿ ಹಳಿಯಾಳದಲ್ಲಿ ಕೇಂದ್ರ ಶಿಕ್ಷಣ ಸಚಿವಾಲಯದ ವೈಜ್ಞಾನಿಕ ತಂತ್ರಜ್ಞಾನ ಮತ್ತು ಪರಿಭಾಷಾ ಆಯೋಗದ ಮಾರ್ಗದರ್ಶನದ ಮೇರೆಗೆ ತಾಂತ್ರಿಕ ಶಿಕ್ಷಣದ ಪರಿಭಾಷೆಯನ್ನು ಕನ್ನಡದಲ್ಲಿ ತೆರೆದಿಡುವ ಎರಡು ದಿನದ ವಿಚಾರ ಸಂಕೀರ್ಣ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಕೇಂದ್ರ ಶಿಕ್ಷಣ ಸಚಿವಾಲಯದ ವೈಜ್ಞಾನಿಕ ತಂತ್ರಜ್ಞಾನ ಮತ್ತು ಪರಿಭಾಷಾ ಆಯೋಗದ ಸಹಾಯಕ ನಿರ್ದೇಶಕ ಡಾ.ಸಂತೋಷಕುಮಾರ್ ಸಭೆಯನ್ನುದ್ದೇಶಿಸಿ ಮಾತನಾಡಿ, ಸಿಎಸ್‌ಟಿಟಿಯ ಉದ್ದೇಶ ಮತ್ತು ಕಾರ್ಯವೈಖರಿಯನ್ನು ವಿವರಿಸಿದರು. ಸಿಎಸ್‌ಟಿಟಿಯು ಭಾರತದಲ್ಲಿ ಬಳಕೆಯಾಗುತ್ತಿರುವ 22ಕ್ಕೂ ಅಧಿಕ ಭಾಷೆಗಳಲ್ಲಿ ತಾಂತ್ರಿಕ ಪರಿಭಾಷಾ ಶಬ್ದಕೋಶ ರಚಿಸಿದೆ ಎಂದು ಹೇಳಿದರು.
ಬೆಳಗಾವಿ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಜಯಂತ ಕಿತ್ತೂರ್, ಸಿಎಸ್‌ಟಿಟಿಯು ಕನ್ನಡ ಪರಿಭಾಷೆ ಶಬ್ದಕೋಶ ರಚಿಸಲು ಮುಂದಾಗಿರುವುದು ಶ್ಲಾಘನೀಯ ಎಂದು ಹೇಳಿದರು. ವಿಜ್ಞಾನ ಹಾಗೂ ತಾಂತ್ರಿಕ ಶಿಕ್ಷಣವನ್ನು ಪ್ರಾದೇಶಿಕ ಭಾಷೆಯಲ್ಲಿ ಕಲಿಯುವುದರಿಂದ ತುಂಬಾ ಅನುಕೂಲವಿದೆ ಎಂದು ಹೇಳಿದರು.
ಬೆಂಗಳೂರಿನ ಸಂಸ್ಕೃತ ಭಾರತೀಯ ಸಂಕಲನಕಾರ ಡಾ.ಜನಾರ್ಧನ ಹೆಗಡೆ, ಪರಿಭಾಷಾ ಶಬ್ದಕೋಶ ನಿರ್ಮಾಣಕ್ಕೆ ಸಂಸ್ಕೃತ ಭಾಷೆಯ ಅವಶ್ಯಕತೆ ಇದೆ. ಇದರಿಂದ ಶಬ್ದಕೋಶ ರಚನೆ ಸರಳವಾಗುವುದೆಂದು ನುಡಿದರು.
ಇದೇ ಸಂದರ್ಭದಲ್ಲಿ ಗಣ್ಯರು ಹಾಗೂ ವಿಚಾರ ಸಂಕೀರ್ಣದ ಸಂಪನ್ಮೂಲ ವ್ಯಕ್ತಿಗಳಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದ ಮುಖ್ಯಸ್ಥರು ಹಾಗೂ ಆವಿಷ್ಕಾರ ಪರಿಷತ್ತಿನ ಅಧ್ಯಕ್ಷರು ಮತ್ತು ಈ ವಿಚಾರ ಸಂಕೀರ್ಣದ ಸಂಚಾಲಕ ಡಾ.ಮಹೇಂದ್ರ ದೀಕ್ಷಿತ್ ಅವರು ಗಣ್ಯರು ಹಾಗೂ ಸಂಪನ್ಮೂಲ ವ್ಯಕ್ತಿಗಳ ಕಿರುಪರಿಚಯಿಸುತ್ತ ಸಭಿಕರನ್ನು ಸ್ವಾಗತಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಡಳಿತ ವಿಭಾಗದ ಮುಖ್ಯಸ್ಥ ಪ್ರೊ.ಮಂಜುನಾಥ ವಂದಿಸಿದರು. ಪ್ರೊ.ಭಾನುಪ್ರಿಯ ನಿರೂಪಿಸಿದರು. ವಿವಿಧ ಮಹಾವಿದ್ಯಾಲಯಗಳಿಂದ ಆಗಮಿಸಿದ 100ಕ್ಕೂ ಅಧಿಕ ಬೋಧಕ ಸಿಬ್ಬಂದಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಎಂದು ಪ್ರಾಂಶುಪಾಲ ಡಾ.ವಿ.ಎ.ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.