ಹೊನ್ನಾವರ: ತಾಲೂಕಿನ ಸೇಂಟ್ ಇಗ್ನೇಶಿಯಸ್ ಆಸ್ಪತ್ರೆಯ ಸಿಬ್ಬಂದಿಗಳು ಅನಾಥ ವೃದ್ಧ ಮಹಿಳೆಯೊಬ್ಬರಿಗೆ 6 ತಿಂಗಳು ಉಚಿತ ಚಿಕಿತ್ಸೆ ನೀಡಿದ್ದಲ್ಲದೆ, ನಿಧನರಾದ ಆ ಮಹಿಳೆಯ ಶವ ಸಂಸ್ಕಾರವನ್ನು ನೆರವೇರಿಸಿ, ಮಾನವೀಯತೆ ಮೆರೆದಿದ್ದಾರೆ.
ಕಮಲಾಬಾಯಿ ಎಂಬ ಹೆಸರಿನ ಮಹಿಳೆ ಕ್ಯಾನ್ಸರ್ ಮತ್ತು ಅದರ ಪರಿಣಾಮದ ಸಮಸ್ಯೆಯಿಂದ ಬಳಲುತ್ತಿದ್ದಳು. 6 ತಿಂಗಳ ಹಿಂದೆ ಇಗ್ನೇಶಿಯಸ್ ಆಸ್ಪತ್ರೆಗೆ ದಾಖಲಾದ ಅವಳಿಗೆ ಕ್ಯಾನ್ಸರ್ ತಜ್ಞ ಡಾ.ವಿಶ್ವಾಸ ಪೈ ಮತ್ತು ಡಾ.ಅಶೋಕ ಯರಗುಡ್ಡಿ ಚಿಕಿತ್ಸೆ ನೀಡಿದ್ದರು. ತಾನು ನಿಧನರಾದರೆ ಶವ ಸಂಸ್ಕಾರವನ್ನು ನೀವೇ ಮಾಡಿ, ನನ್ನ ಆಸ್ತಿಯನ್ನು ನೀವೇ ತೆಗೆದುಕೊಳ್ಳಿ ಎಂದು ಹೇಳಿದ್ದಳು.
ಶವ ಸಂಸ್ಕಾರಕ್ಕೆ ಬಂಧುಗಳು ಬರದ ಕಾರಣ ಉಮೇಶ ಕಾಮತ ಎಂಬುವವರ ಸಹಕಾರದಿಂದ ಆಸ್ಪತ್ರೆಯ ಸಿಬ್ಬಂದಿಗಳೇ ಶವ ಸಂಸ್ಕಾರ ನೆರವೇರಿಸಿದ್ದು, ಮೃತರ ಆಸ್ತಿ ನಮಗೆ ಬೇಡ. ಅದನ್ನು ಅವರ ಅಧಿಕೃತ ವಾರಸುದಾರರು ಪಡೆದುಕೊಳ್ಳಲಿ ಎಂದು ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಆ್ಯಂಟನಿ ಲೋಪಿಸ್ ಹೇಳಿದ್ದಾರೆ. ಮಾನವೀಯ ಕಾಳಿಜಿಯ ಇಂತಹ ಹಲವು ಸೇವೆಯನ್ನು ಇಗ್ನೇಶಿಯಸ್ ಆಸ್ಪತ್ರೆಯ ಸಿಬ್ಬಂದಿಗಳು ಮಾಡುತ್ತಿರುವುದರಿಂದ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.