ಜೊಯಿಡಾ: ತಾಲೂಕಿನ ಉಳವಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆಣಕೋಳ ಮತ್ತು ಚಂದ್ರಾಳಿ ಬಳಿ 6 ದನಗಳನ್ನು ಬೇಟೆಯಾಡಿದ್ದ ಹುಲಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿದು ಹಂಪಿ ಮೃಗಾಲಯಕ್ಕೆ ತೆಗೆದುಕೊಂಡು ಹೋಗಿದ್ದಾರೆ.
ಚಂದ್ರಾಳಿ ಮತ್ತು ಹೆಣಕೋಳ ಬಳಿ ತಲಾ 3 ದನಗಳನ್ನು ಹುಲಿ ಬೇಟೆಯಾಡಿತ್ತು. ಸೆರೆ ಹಿಡಿದ ಹುಲಿ ವಯಸ್ಸಾದ ಕಾರಣ ಕೊಟ್ಟಿಗೆಯೊಳಗೆ ಕಟ್ಟಿದ ದನಗಳನ್ನೇ ಬಂದು ಹಿಡಿಯುತ್ತಿತ್ತು ಎನ್ನಲಾಗಿದೆ. ಇದರಿಂದಾಗಿ ಆತಂಕಕ್ಕೊಳಗಾಗಿದ್ದ ಸ್ಥಳೀಯರು, ಅರಣ್ಯ ಅಧಿಕಾರಿಗಳ ಮೇಲೆ ಕಿಡಿಕಾರುತ್ತಿದ್ದರು. ಅಲ್ಲದೇ ಶಾಸಕ ಆರ್.ವಿ.ದೇಶಪಾಂಡೆ, ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೂ ಈ ಬಗ್ಗೆ ಮಾಹಿತಿ ನೀಡಿ, ಹುಲಿ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳುವಂತೆ ಉಳವಿ ಗ್ರಾಮ ಪಂಚಾಯತಿ ಮೂಲಕ ಮನವಿ ಸಲ್ಲಿಸಲಾಗಿತ್ತು. ಅಂತೂ ಕಾರ್ಯಪ್ರವೃತ್ತರಾದ ಅರಣ್ಯ ಅಧಿಕಾರಿಗಳು, ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಡಿಸಿಎಫ್ ಮಾರಿಯೋ ಕ್ರಿಸ್ತರಾಜ್ ಅವರ ಮಾರ್ಗದರ್ಶನದಲ್ಲಿ ಹುಲಿಗೆ ಆಹಾರವನ್ನಿಟ್ಟು ಬೋನಿನೊಳಗೆ ಸೆರೆ ಹಿಡಿದಿದ್ದಾರೆ.