ಹೊನ್ನಾವರ: ತಾಲೂಕಿನ ಗುಡ್ಡೆಬಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವಿವೇಕ ಯೋಜನೆ ಅಡಿಯಲ್ಲಿ 13.90 ಲಕ್ಷ ಅಂದಾಜು ಮೊತ್ತದಲ್ಲಿ ನಿರ್ಮಾಣವಾಗಲಿರುವ ನೂತನ ಕೊಠಡಿ ನಿರ್ಮಾಣ ಕಾಮಗಾರಿಗೆ ಶಾಸಕ ದಿನಕರ ಶೆಟ್ಟಿ ಗುದ್ದಲಿಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ರಾಜ್ಯಾದ್ಯಂತ ವಿವೇಕ ಯೋಜನೆ ಅಡಿಯಲ್ಲಿ 2500 ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಅನುದಾನ ಒದಗಿಸುವ ಮೂಲಕ ಸರ್ಕಾರಿ ಶಾಲೆಯ ಕಟ್ಟಡ ಸಮಸ್ಯೆ ಬಗೆಹರಿಸಲು ಮುಂದಾಗಿದ್ದಾರೆ. ನಮ್ಮ ವಿಧಾನಸಭಾ ಕ್ಷೇತ್ರದಲ್ಲಿ 60 ನೂತನ ಕೊಠಡಿಗಳು ನಿರ್ಮಾಣವಾಗಲಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದ ಸುಧಾರಣೆಗೆ ಪ್ರಥಮ ಆದ್ಯತೆಯಾಗಿದ್ದು, ಈ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಾಗಿದೆ. ನೂತನ ಕೊಠಡಿಗಳ ನಿರ್ಮಾಣದ ಜೊತೆಗೆ ವರ್ಗಕೋಣೆಗಳ ದುರಸ್ಥಿಗೆ ಅಗತ್ಯವಿರುವ ಅನುದಾನವನ್ನು ಅನೇಕ ಶಾಲೆಗಳಿಗೆ ಒದಗಿಸಲಾಗುತ್ತಿದೆ ಎಂದರು.
ನoತರ ಬೈರವೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು ರಸ್ತೆ ಕಾಮಗಾರಿ ವೀಕ್ಷಿಸಿ ಚಾಲನೆ ನೀಡಿದರು. ಈ ವೇಳೆ ಮುಗ್ವಾ ಗ್ರಾ.ಪಂ. ಅಧ್ಯಕ್ಷೆ ಗೌರಿ ಅಂಬಿಗ,ಉಪಾಧ್ಯಕ್ಷ ಕಿರಣ ಹೆಗಡೆ, ಸದಸ್ಯರಾದ ಸುರೇಶ ಶೆಟ್ಟಿ, ಆಶಾ ಹೆಗಡೆ, ಕಡ್ಲೆ ಗ್ರಾ.ಪಂ. ಅಧ್ಯಕ್ಷ ಗೋವಿಂದ ಗೌಡ, ಬಾಲಚಂದ್ರ ನಾಯ್ಕ, ಬಿಜೆಪಿ ತಾಲೂಕ ಅಧ್ಯಕ್ಷ ರಾಜೇಶ ಭಂಡಾರಿ, ನಾರಾಯಣ ಹೆಗಡೆ, ಸೇರಿದಂತೆ ಮತ್ತಿತರರು ಇದ್ದರು.