ಸಿದ್ದಾಪುರ: ರಾಜ್ಯದಲ್ಲಿ ನಾಮಧಾರಿ,ಈಡಿಗ, ಬಿಲ್ಲವ ಸಮಾಜದ ಅಭಿವೃದ್ಧಿಗಾಗಿ ನಾರಾಯಣಗುರುಗಳ ಹೆಸರಿನಲ್ಲಿ ಅಭಿವೃದ್ಧಿ ನಿಗಮವನ್ನು ರಚನೆ ಮಾಡುವುದಾಗಿ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಅವರು ಪಟ್ಟಣದ ಹೊಸೂರಿನಲ್ಲಿ ನಾಮಧಾರಿ ಸಮುದಾಯ ಭವನದ ಮೊದಲನೇ ಮಹಡಿಯ ಶಿಲನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಎಲ್ಲಾ ಜಾತಿಗಳಿಗೂ ಅಭಿವೃದ್ಧಿ ನಿಗಮ ರಚನೆಯನ್ನು ಮಾಡಬೇಕು ಎನ್ನುವ ಬೇಡಿಕೆಗಳು ಹೆಚ್ಚಾದರೆ ಹೇಗೆ ಎನ್ನುವ ಚರ್ಚೆ ನಡೆದಿದೆ. ಆದರೂ ನಾರಾಯಣಗುರುಗಳ ಅಭಿವೃದ್ಧಿ ನಿಗಮ ಆಗಬೇಕು ಎನ್ನುವ ಬೇಡಿಕೆ ಮೊದಲಿನಿಂದ ಇದೆ. ಆ ಕುರಿತು ಮುಖ್ಯಮಂತ್ರಿಗಳಲ್ಲಿ ಪ್ರಸ್ತಾಪವನ್ನು ಮಾಡಲಾಗಿದೆ. ನಾರಾಯಣ ಗುರುಗಳ ಕೋಶವನ್ನು ಮಾಡಿದರೆ ಸಾಲದು ನಿಗಮ ರಚನೆಯ ಮೂಲಕ ಈಡಿಗ , ನಾಮಧಾರಿ, ಬಿಲ್ಲವ ಸಮಾಜದ ಅಭಿವೃದ್ಧಿ ಮಾಡಬೇಕಾಗಿದೆ ಎಂದು ತಿಳಿಸಲಾಗಿದೆ. ಈ ಕುರಿತು ನಮ್ಮ ಪಕ್ಷದ ರಾಜ್ಯಾಧ್ಯಕ್ಷರು ಹೇಳಿದ್ದಾರೆ. ಹಾಗಾಗಿ ನಿಗಮದ ರಚನೆಯನ್ನು ಮಾಡಿ ಮುಗಿಸುತ್ತೇವೆ ಎಂದು ಜಿಲ್ಲಾ ಉಸ್ತವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಈ ಸಂದರ್ಭದಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ , ತಾಲೂಕ ನಾಮಧಾರಿ ಸಮಾಜದವರ ಅಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಜಿ.ನಾಯ್ಕ ಹಣಜೀಬೈಲ್, ಪಟ್ಟಣ ಪಂಚಾಯತ ಅಧ್ಯಕ್ಷೆ ಚಂದ್ರಕಲಾ ಸುರೇಶ ನಾಯ್ಕ, ನಾಮಧಾರಿ ಸಂಘದ ಗೌರವಾಧ್ಯಕ್ಷರಾದ ಆನಂದ ನಾಯ್ಕ, ಉಪಾಧ್ಯಕ್ಷರುಗಳಾದ ಕೆ.ಜಿ.ನಾಗರಾಜ, ವಿ.ಎನ್.ನಾಯ್ಕ ಬೇಡ್ಕಣಿ, ಸಮಾಜದ ಹಿರಿಯರಾದ ಬಿ.ಬಿ.ನಾಯ್ಕ ಉಪಸ್ಥಿತರಿದ್ದರು.