ಶಿರಸಿ: ಭಾಷೆಯನ್ನು ಶೃಂಗರಿಸುವುದೇ ಸಾಹಿತ್ಯ. ಈ ಕೆಲಸವನ್ನು ಸಾಹಿತಿ ಮಾಡುತ್ತಾನೆ ಮತ್ತು ಸಾರ್ವಜನಿಕರಿಗೆ ಹಿತವನ್ನುಂಟು ಮಾಡುವ ತಿಳಿವಳಿಕೆ ನೀಡುವವನೇ ಸಾಹಿತಿ ಎಂದು ಹಿರಿಯ ಸಾಹಿತಿ ಜಿ.ವಿ.ಭಟ್ಟ ಕೊಪ್ಪಲುತೋಟ ನುಡಿದರು.
ಅವರು ನೆಮ್ಮದಿ ಓದುಗರ ಬಳಗ ಹಾಗೂ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಶಿರಸಿ ಘಟಕದ ಸಂಯುಕ್ತಾಶ್ರಯದಲ್ಲಿ ನೆಮ್ಮದಿ ಕುಟೀರದಲ್ಲಿ ನಡೆದ ಕೃತಿಗಳ ಅವಲೋಕನ ಮತ್ತು ಕವಿಗೋಷ್ಠಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ಜಿ.ಎ.ಹೆಗಡೆ ಸೋಂದಾ, ನಿರಂತರ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ನಡೆಯುತ್ತಿರುವ ಕೆಲವೇ ಕೆಲವು ತಾಣಗಳಲ್ಲಿ ನೆಮ್ಮದಿ ಕುಟೀರವೂ ಒಂದು. ಸಾಹಿತ್ಯ ಶರಧಿಯಲ್ಲಿ ಮೀಯುವ ಅವಕಾಶವನ್ನು ಕಲ್ಪಿಸಿಕೊಡುತ್ತಿರುವ ನೆಮ್ಮದಿ ಆವರಣವನ್ನು ಕೊಂಡಾಡಿದಷ್ಟು ಕಡಿಮೆ. ಕೇ.ಕ.ಸಾ.ವೇದಿಕೆಯ ತಾಲೂಕು ಘಟಕದ ಅಧ್ಯಕ್ಷ ಕೃಷ್ಣ ಪದಕಿಯವರು ಇಂಥ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಅನೇಕ ಉದಯೋನ್ಮುಖರನ್ನು ಬೆಳಕಿಗೆ ತರುತ್ತಿದ್ದಾರೆ. ಇವರ ಉತ್ಸಾಹವನ್ನು ಪ್ರೋತ್ಸಾಹಿಸೋಣ ಎಂದು ಅಭಿಪ್ರಾಯಪಟ್ಟರು.
ಕೃತಿ ಅವಲೋಕನದಲ್ಲಿ ಜಗದೀಶ ಭಂಡಾರಿಯವರ ‘ಅಂತರ’ ಕೃತಿಯನ್ನು ಕವಯತ್ರಿ ಶೋಭಾ ಭಟ್ಟ ಅವಲೋಕಿಸಿದರೆ, ಲಕ್ಷ್ಮಣ ಶಾನಭಾಗರ “ಹನಿ-ಧ್ವನಿ” ಕೃತಿಯನ್ನು ಕವಯತ್ರಿ ರಾಜಲಕ್ಷ್ಮೀ ಭಟ್ಟ ಬೊಮ್ಮನಹಳ್ಳಿ ಅವಲೋಕಿಸಿದರು. ಕವಿಗೋಷ್ಠಿಯಲ್ಲಿ ಶರಾವತಿ ಭಟ್ಟ, ಡಿ.ಎಮ್.ಭಟ್ ಕುಳವೆ, ವಿಮಲಾ ಭಾಗ್ವತ, ಕೆ.ಎಸ್.ಅಗ್ನಿಹೋತ್ರಿ, ಜಲಜಾಕ್ಷಿ ಶೆಟ್ಟಿ, ನರಸಿಂಹ ಹೆಗಡೆ, ಲಕ್ಷ್ಮಣ ಶಾನಭಾಗ, ಉಮೇಶ ದೈವಜ್ಞ, ಯಶಸ್ವಿನಿ ಶ್ರೀಧರಮೂರ್ತಿ, ರೇಣುಕಾ ನಾಗರಾಜ, ಜಿ.ವಿ.ಕೆ, ದಾಕ್ಷಾಯಿಣಿ ಪಿ.ಸಿ, ಶೋಭಾ ಭಟ್ಟ ಮತ್ತು ರಾಜಲಕ್ಷ್ಮಿ ತಮ್ಮ ಸ್ವರಚಿತ ಕವನಗಳನ್ನು ವಾಚಿಸಿದರು.
ಕೃತಿಕಾರ ಲಕ್ಷ್ಮಣ ಶಾನಭಾಗ, ಕೃತಿಗಳ ಅವಲೋಕಿಸಿದ ಶೋಭಾ ಭಟ್ಟ ಮತ್ತು ರಾಜಲಕ್ಷ್ಮಿ ಭಟ್ಟ ಅವರನ್ನು ಗೌರವಿಸಲಾಯಿತು. ಡಾ.ಶೈಲಜಾ ಮಂಗಳೂರು ಅವರ ಸರಸ್ವತಿ ಪ್ರಾರ್ಥನೆಯಿಂದ ಕಾರ್ಯಕ್ರಮ ಚಾಲನೆ ಪಡೆಯಿತು. ಕೇ.ಕ.ಸಾ.ವೇ ಅಧ್ಯಕ್ಷ ಕೃಷ ಪದಕಿ ಸರ್ವರನ್ನು ಸ್ವಾಗತಿಸಿ ವಂದಿಸಿದರು. ದಾಕ್ಷಾಯಿಣಿ ಪಿ ಸಿ ಯವರು ಸಂಪೂರ್ಣ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಕೃತಿಕಾರ ಲಕ್ಷ್ಮಣ ಶಾನಭಾಗ, ಜಗದೀಶ ಭಂಡಾರಿ ಮತ್ತು ವಿ.ಪಿ.ಹೆಗಡೆ ವೈಶಾಲಿಯವರು ಸಾಂದರ್ಭಿಕವಾಗಿ ಮಾತನಾಡಿದರು.