ಶಿರಸಿ: ಲಯನ್ಸ್ ಶಾಲೆ ವತಿಯಿಂದ ಡಿ.22 ರಿಂದ ಡಿ.24ರವರೆಗೆ ದತ್ತಿನಿಧಿ ಹಾಗೂ ಪ್ರತಿಭಾ ಪುರಸ್ಕಾರ, ಸಂಗೀತ ಸಿಂಚನ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಲಯನ್ಸ್ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಎನ್.ವಿಜಿ ಭಟ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಯನ್ಸ್ ಸುವರ್ಣ ಸಂಭ್ರಮದ ಪ್ರಯುಕ್ತ ಡಿ.23 ರಂದು ಸಂಗೀತ ಸಿಂಚನ ಆಯೋಜಿಸಲಾಗಿದೆ. ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತ ಪಂ.ಎಂ.ಪಿ. ಹೆಗಡೆ ಪಡಿಗೆರೆ ಉದ್ಘಾಟಿಸಲಿದ್ದು, ಲಯನ್ಸ್ ಅಧ್ಯಕ್ಷ ತ್ರಿವಿಕ್ರಮ ಪಟವರ್ಧನ ಅಧ್ಯಕ್ಷತೆ ವಹಿಸಲಿದ್ದಾರೆ. ಅಂದು ಹಿಂದೂಸ್ಥಾನಿ ಗಾಯನ ಹಾಗೂ ದಾಸವಾಣಿಯಲ್ಲಿ ಪದ್ಮಶ್ರೀ ಪಂ.ವೆಂಕಟೇಶ್ ಕುಮಾರ್, ಸಿತಾರ ವಾದನದಲ್ಲಿ ಅಂಕುಶ ನಾಯಕ, ಹಾರ್ಮೋನಿಯಂನಲ್ಲಿ ನರೇಂದ್ರ ನಾಯಕ, ರಾಜೇಂದ್ರ ನಾಕೋಡ್ ತಬಲಾ ಸಾಥ್ ನೀಡಲಿದ್ದಾರೆ ಎಂದರು.
ಇದಕ್ಕೂ ಮುನ್ನ ಡಿ.22 ರಂದು ಲಯನ್ಸ್ ಶಾಲೆಯ ವಾರ್ಷಿಕ ದತ್ತಿನಿಧಿ ಹಾಗೂ ಪ್ರತಿಭಾ ಪುರಸ್ಕಾರ ನಡೆಯಲಿದೆ. ಅಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಎಸ್.ಎಸ್. ಭಟ್ ಕಾಗಾಲ್ ಅತಿಥಿಯಾಗಿ ಆಗಮಿಸಲಿದ್ದು, ಡಿ.24 ರಂದು ಶಾಲಾ ವಾರ್ಷಿಕೋತ್ಸವ ಹಮ್ಮಿಕೊಳ್ಳಲಾಗಿದೆ ಎಂದರು.
ಲಯನ್ಸ್ ಕ್ಲಬ್ ಅಧ್ಯಕ್ಷ ತ್ರಿವಿಕ್ರಮ ಪಟವರ್ಧನ ಮಾತನಾಡಿ,ಲಯನ್ಸ್ ಶಾಲೆಯ ವತಿಯಿಂದ ಪದವಿ ಪೂರ್ವ ಕಾಲೇಜು ಆರಂಭವಾಗಲಿದೆ. ಈಗಾಗಲೇ ಸರಕಾರಕ್ಕೆ ಅರ್ಜಿ ಸಲ್ಲಿಸಲಾಗಿದ್ದು, ಇಂಟಿಗ್ರೇಟೆಡ್ ಕಾಲೇಜು ಆರಂಭವಾಗಲಿದೆ. ಇಲ್ಲಿನ ವಿದ್ಯಾರ್ಥಿಗಳು ಸಿಇಟಿ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚಿನ ಶ್ರೇಣಿ ಬರುತ್ತಿಲ್ಲ. ಹೀಗಾಗಿ ಲಯನ್ಸ್ ಎಜುಕೇಶನ್ ಸೊಸೈಟಿ ವತಿಯಿಂದ ಕೋಚಿಂಗ್ ಸಹಿತ ಇರುವ ಅತ್ಯುತ್ತಮ ಕಾಲೇಜು ಆರಂಭವಾಗಿದೆ. ಇಲ್ಲಿನ ವಿದ್ಯಾರ್ಥಿಗಳಿಗೆ ಹೊರ ಜಿಲ್ಲೆಯಲ್ಲಿ ಸಿಗುವ ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡುವ ಉದ್ದೇಶ ಹೊಂದಲಾಗಿದೆ ಎಂದರು. ವಿನಯ್ ಹೆಗಡೆ, ಪ್ರೊ.ರವಿ ನಾಯ್ಕ, ಪ್ರಭಾಕರ ಹೆಗಡೆ, ಪ್ರಾಚಾರ್ಯ ಶಶಾಂಕ ಹೆಗಡೆ, ಉದಯ ಸ್ವಾದಿ ಇನ್ನಿತರರು ಇದ್ದರು.