ಯಲ್ಲಾಪುರ : ಕಿರವತ್ತಿಯ ಸಭಾಭವನದಲ್ಲಿ ಏಕದಂತ ಸಂಜೀವಿನಿ ಗ್ರಾಮ ಒಕ್ಕೂಟದ ವತಿಯಿಂದ ಲಿಂಗತ್ವ ಆಧಾರಿತ ದೌರ್ಜನ್ಯವನ್ನು ನಿವಾರಣೆಗೊಳಿಸುವುದರ ಕುರಿತು ಅಭಿಯಾನದ ಅಂಗವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಕಿರವತ್ತಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಬೀನಾ ಉಸ್ಮಾನ್ ಪಟೇಲ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಕಿರವತ್ತಿ ಸಂಜೀವಿನಿ ಒಕ್ಕೂಟದ ಮಾಜಿ ಅಧ್ಯಕ್ಷೆ ರಿಹಾನಾ ಬೆಂತೂರ್ ವಹಿಸಿದ್ದರು.
ತಾಲೂಕು ಪಂಚಾಯತ ಸಂಜೀವಿನಿ ವಲಯ ಮೇಲ್ವಿಚಾರಕರಾದ ರಾಜಾರಾಮ್ ವೈದ್ಯ ಪ್ರಾಸ್ತಾವಿಕ ಮಾತನಾಡಿ, ಸಮಾಜದಲ್ಲಿ ಹೆಣ್ಣು ಗಂಡಿನ ತಾರತಮ್ಯ ಹೋಗಬೇಕಾಗಿದೆ. ಹೆಣ್ಣು ಮತ್ತು ಗಂಡು ಸಮಾನತೆ ಬರಬೇಕು. ಅದಕ್ಕೆ ಮಕ್ಕಳಿಗೆ ಚಿಕ್ಕವರಿರುವಾಗಲೇ ಸರಿಯಾದ ಸಂಸ್ಕಾರ ಕೊಟ್ಟರೇ ಉತ್ತಮ ಸಮಾಜ ರಚನೆಯಾಗಲು ಸಾಧ್ಯ. ಆ ಮೂಲಕ ಲಿಂಗತ್ವ ದೌರ್ಜನ್ಯ ತಡೆಗಟ್ಟಬಹುದೆಂದು ಹೇಳಿದರು.
ವಕೀಲರಾದ ಬೀಬಿ. ಅಮೀನಾ ಶೇಖ ಮಹಿಳಾ ದೌರ್ಜನ್ಯದ ಕುರಿತು ಉಪನ್ಯಾಸ ನೀಡಿ, ಇಂದು ಸಮಾಜದಲ್ಲಿ ಮಹಿಳೆಯರು ಎಷ್ಟೇ ಸುಶೀಕ್ಷಿತರಾಗಿದ್ದರೂ, ಗೌರವಾನ್ವಿತ ಹುದ್ದೆ ಅಲಂಕರಿಸಿದರು ಕೂಡ ಎಲ್ಲ ಸಮಯದಲ್ಲಿ ಮಹಿಳೆ ಸುರಕ್ಷಿತಳಾಗಿಲ್ಲ. ಮಹಿಳೆಯರ ರಕ್ಷಣೆಗಾಗಿ ಅನೇಕ ಕಾನೂನುಗಳಿವೆ. ಎಲ್ಲಾ ಸಂದರ್ಭದಲ್ಲಿ ಈ ಕಾನೂನು ರಕ್ಷಣೆಗೆ ಬರುವದಿಲ್ಲ. ನಾವು ನಮ್ಮ ಸುತ್ತಮುತ್ತಲು ಒಂದು ಚೌಕಟ್ಟನ್ನು ಹಾಕಿಕೊಂಡು ಬದುಕಬೇಕಾಗುತ್ತದೆ. ನಮ್ಮ ಕುಟುಂಬ, ನಮ್ಮ ಮಕ್ಕಳ ಬಗ್ಗೆ ನಿಗಾ ವಹಿಸಬೇಕಾಗುತ್ತದೆ. ಕಾನೂನಿನ ತಿಳುವಳಿಕೆ ಪಡೆದು ಇತರರಿಗೂ ತಿಳುವಳಿಕೆ ನೀಡಿ ಜಾಗೃತರಾಗಿ ಬದುಕಬೇಕು ಎಂದ ಅವರು, ಡಿವಿಎ. ಆಕ್ಟ್, ಡೌರಿ ಆಕ್ಟ್, ಲೈಂಗಿಕ ದೌರ್ಜನ್ಯ, ಜೀವನಾoಶ, ಪೋಕ್ಸೋ ಕಾನೂನುಗಳ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಕಿರವತ್ತಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಲಲಿತಾ ಜಗದಾಳಿ ಉಪಸ್ಥಿತರಿದ್ದರು.
ರೂಪಾ ಸೋಮಾಪುರಕರ್ ಕಾರ್ಯಕ್ರಮ ನಿರೂಪಿಸಿದರು..ಕಾರ್ಯಕ್ರಮದಲ್ಲಿ ಕಿರವತ್ತಿ ಸುತ್ತಲಿನ ಹಳ್ಳಿ ಹಳ್ಳಿಯಿಂದ ಮಹಿಳೆಯರು ಭಾಗವಹಿಸಿದ್ದರು.