ಯಲ್ಲಾಪುರ : ಉತ್ತರ ಕನ್ನಡ ಜಿಲ್ಲೆಯ ಸಾಂಸ್ಕೃತಿಕ ರಾಯಬಾರಿ ಪ್ರಮೋದ ಹೆಗಡೆ ಅವರ ಅಭಿನಂದನಾ ಸಮಾರಂಭಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದೆ ಎಂದು ಅಭಿನಂದನಾ ಸಮಿತಿಯ ಉಪಾಧ್ಯಕ್ಷ ಡಿ ಶಂಕರ್ ಭಟ್ ಹೇಳಿದರು.
ಅವರು ಮಂಗಳವಾರ ಯಲ್ಲಾಪುರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು, ಡಿ.25ರಂದು, ಬೆಳಿಗ್ಗೆ 9:00 ಘಂಟೆಗೆ ಮೆರವಣಿಗೆ ಹಾಗೂ ವಾದ್ಯಗೋಷ್ಠಿಯ ಮೂಲಕ ಪ್ರಮೋದ ಹೆಗಡೆಯವರನ್ನು ಶಕ್ತಿ ಗಣಪತಿ ದೇವಸ್ಥಾನದಿಂದ ಎಪಿಎಂಸಿ ಯಾರ್ಡ್ ರೈತ ಸಭಾಭವನದ ರಾಮಕೃಷ್ಣ ಹೆಗಡೆ ದೊಡ್ಮನೆ ವೇದಿಕೆಗೆ ಕರೆದುಕೊಂಡು ಬರಲಾಗುವುದು,
ವಿಧಾನಸಭಾ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಅಧ್ಯಕ್ಷತೆಯಲ್ಲಿ, ಮಾಜಿ ಸಚಿವರು ಹಾಗೂ ಹಳಿಯಾಳ ಶಾಸಕರಾದ ಆರ್ ವಿ ದೇಶಪಾಂಡೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ‘ಸಾರ್ಥಕ ಸಂಕಲ್ಪ’ ಅಭಿನಂದನಾ ಗ್ರಂಥವನ್ನು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಅನಂತಕುಮಾರ ಹೆಗಡೆ, ವಿಧಾನಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ, ಶಾಸಕರಾದ ಎಚ್ ಕೆ ಪಾಟೀಲ, ಕುಮಟಾ ಶಾಸಕ ದಿನಕರ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ದಿ ಆಗಮಿಸಲಿದ್ದಾರೆ. ವಿದ್ವಾಂಸರಾದ ಉಮಾಕಾಂತ ಭಟ್ ಕೆರೆಕೈ ಅಭಿನಂದನಾ ನುಡಿಗಳನ್ನಾಡಲಿದ್ದಾರೆ.
ಅದೇ ದಿನ ಮಧ್ಯಾಹ್ನ 3:30 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಖ್ಯಾತ ಸಾಹಿತಿ ಜಯಂತ ಕಾಯ್ಕಿಣಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಮುಖ್ಯ ಅತಿಥಿಗಳಾಗಿದ್ದಾರೆ. ನಂತರ ಗಣಪತಿ ಭಟ್ ಮೊಟ್ಟೆಗದ್ದೆ, ರಾಘವೇಂದ್ರ ಆಚಾರ್ಯ ಜಿನ್ಸಾಲೆ, ಕಾವ್ಯಶ್ರೀ ಅಜೇರು ಹಾಗೂ ಗಣಪತಿ ಕವ್ವಾಳೆ ಸಂಗಡಿಗರಿ0ದ ಯಕ್ಷಗಾಯನ ನಡೆಯಲಿದೆ, ಸಂಜೆ 6:30 ಕ್ಕೆ ಸುಬ್ರಮಣ್ಯ ಚೀಟ್ಟಾಣಿ ಬಳಗದಿಂದ ಬ್ರಹ್ಮ ಕಪಾಲ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.
ಕಾಶ್ಯಪ ಪರ್ಣಕುಟಿ ಮಾತನಾಡಿ, 500 ಪುಟಗಳ ಪ್ರಮೋದ ಸಂಕಲ್ಪ ಪುಸ್ತಕವನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಗುವುದು, ಈ ಪುಸ್ತಕದಲ್ಲಿ ಸಂಕಲ್ಪ, ಸಿದ್ಧಿ ಮತ್ತು ಪ್ರಸಿದ್ಧಿ ಮೂರು ಭಾಗಗಳಿವೆ, ಸಂಕಲ್ಪದಲ್ಲಿ ಪ್ರಮೋದ ಹೆಗಡೆ ಸಾಗಿಬಂದ ಹಾದಿ, ಸಿದ್ಧಿಯಲ್ಲಿ ಜಿಲ್ಲೆಯ ಬಹುತೇಕ ಕ್ಷೇತ್ರಗಳ ಅಭಿವೃದ್ಧಿಗಳ ತಜ್ಞರಿಂದ ಲೇಖನ ಹಾಗೂ ಪ್ರಸಿದ್ಧಿಯಲ್ಲಿ ಪ್ರಮೋದ ಹೆಗಡೆಯವರ ಬಾಲ್ಯದಿಂದ ಇಲ್ಲಿಯವರೆಗಿನ ಭಾವಚಿತ್ರಗಳು, ಲೇಖನಗಳು ಹಾಗೂ ಪರಿಚಯಗಳು ಪ್ರಕಟವಾಗಲಿವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪಿ ಜಿ ಹೆಗಡೆ ಕಳಚೆ, ಸಿ.ಜಿ. ಹೆಗಡೆ, ಟಿ.ಶಂಕರ ಭಟ್, ಪ್ರಸಾದ ಹೆಗಡೆ ಇದ್ದು ಮಾಹಿತಿ ನೀಡಿದರು.
ಪ್ರಮೋದ ಹೆಗಡೆ ಅಭಿನಂದನೆ ಸಮಾರಂಭಕ್ಕೆ ಭರ್ಜರಿ ಸಿದ್ಧತೆ : ಡಿ ಶಂಕರ ಭಟ್ಟ
